ಚೆನ್ನಮ್ಮನ ಕಿತ್ತೂರು : ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ 09ನೇ ಮಹಾಸಭೆಯು ಆಗಸ್ಟ್ 1, 2026ರಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯಿತು. ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಮತ್ತು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಿತ್ತೂರಿನ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಕಿತ್ತೂರು ಕೋಟೆ ಆವರಣದಲ್ಲಿ ಥೀಮ್ ಪಾರ್ಕ್ ನಿರ್ಮಾಣಕ್ಕೆ ₹30 ಕೋಟಿ ಅನುದಾನ ಈಗಾಗಲೇ ಸಚಿವ ಸಂಪುಟದಿಂದ ಅನುಮೋದನೆಯಾಗಿದ್ದು, ಕಾಮಗಾರಿಯನ್ನು ಶೀಘ್ರ ಆರಂಭಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ಪ್ರಾಧಿಕಾರದ 2010ರಿಂದ 2025ರವರೆಗಿನ ವಾರ್ಷಿಕ ವರದಿ ಹಾಗೂ ಲೆಕ್ಕಪರಿಶೋಧನಾ ವರದಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಸಾಹಿತ್ಯೋತ್ಸವ, ಕಲಾ ಪ್ರದರ್ಶನ, ಸಮ್ಮೇಳನ, ವಿಚಾರಗೋಷ್ಠಿ ಹಾಗೂ ವಿಶೇಷ ಕಾರ್ಯಕ್ರಮಗಳಿಗೆ ವಾರ್ಷಿಕ ₹20 ಲಕ್ಷ ಅನುದಾನ ನೀಡಲು ಸಹ ಒಪ್ಪಿಗೆ ಸೂಚಿಸಲಾಯಿತು.
ಕಿತ್ತೂರಿನ ಐತಿಹಾಸಿಕ ಪರಂಪರೆಗೆ ಅಧಿಕೃತ ಲಾಂಛನ
ಕಿತ್ತೂರಿನ ಐತಿಹಾಸಿಕ ಪರಂಪರೆ, ಸಾಂಸ್ಕೃತಿಕ ವೈಭವ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಪ್ರತಿಬಿಂಬಿಸುವ ಅಧಿಕೃತ ಲಾಂಛನ ರೂಪಿಸಲು ತಜ್ಞರ ಸಮಿತಿ ರಚಿಸಲು ಸಭೆ ನಿರ್ಧರಿಸಿತು. ಕಿತ್ತೂರಿನ ಇತಿಹಾಸ ಮತ್ತು ಪರಂಪರೆಯ ಕುರಿತು ಆಳವಾದ ಜ್ಞಾನ ಹೊಂದಿರುವ ಐವರು ಸದಸ್ಯರ ತಜ್ಞರ ಸಮಿತಿ ರಚನೆಗೂ ಅನುಮೋದನೆ ನೀಡಲಾಯಿತು.
ಕೋಟೆ, ವಸ್ತುಸಂಗ್ರಹಾಲಯ ವೀಕ್ಷಣಾ ಶುಲ್ಕ ಪರಿಷ್ಕರಣೆ
ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯ ಹಾಗೂ ಕೋಟೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ತಲಾ ₹25 ಶುಲ್ಕ ನಿಗದಿಪಡಿಸಲು ಸಭೆ ಅನುಮೋದನೆ ನೀಡಿತು. ಈ ಮೂಲಕ ಸಂಗ್ರಹವಾಗುವ ಆದಾಯವನ್ನು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ನಿರ್ವಹಿಸಲು ಬ್ಯಾಂಕ್ ಖಾತೆ ತೆರೆಯಲು ತೀರ್ಮಾನಿಸಲಾಯಿತು. ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ನೀಡಲು ಸಭೆ ನಿರ್ಧರಿಸಿತು.
34 ಪರಂಪರೆ ಸ್ಥಳಗಳ ಅಭಿವೃದ್ಧಿಗೆ ಒತ್ತು
ಕಿತ್ತೂರು ಹಾಗೂ ಸುತ್ತಮುತ್ತಲಿನ 34 ಪರಂಪರೆ ಸ್ಥಳಗಳನ್ನು ಅಭಿವೃದ್ಧಿಪಡಿಸಿ, ಕಿತ್ತೂರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಉದ್ದೇಶವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು. ಸಭೆಯಲ್ಲಿ ಶಾಸಕರಾದ ಬಾಬಾ ಸಾಹೇಬ ಪಾಟೀಲ , ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಸಂತೋಷ ಹಾನಗಲ್ಲ, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಗಣ್ಯರು ಉಪಸ್ಥಿತರಿದ್ದರು. “ಚನ್ನಮ್ಮನ ನಾಡಿನ ಐತಿಹಾಸಿಕ ಕುರುಹುಗಳ ಅಭಿವೃದ್ಧಿ ಮತ್ತು ಪುನರುಜ್ಜೀವನಕ್ಕೆ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿ ನಡೆಯಲಿದೆ” ಎಂದು ಶಾಸಕ ಬಾಬಾ ಸಾಹೇಬ ಪಾಟೀಲ ತಿಳಿಸಿದ್ದಾರೆ.