ಯಾರ ಒತ್ತಡಕ್ಕೂ ಮಣಿದು ಬರ ಘೋಷಿಸಲ್ಲ, ಮಾತುಕತೆಯಲ್ಲೇ ಮೇಕದಾಟು ವಿವಾದಕ್ಕೆ ಪರಿಹಾರ: ಸಿಎಂ ಡಿಕೆ.ಶಿವಕುಮಾರ್
ಬರ ಘೋಷಣೆಗೆ ನಿಗದಿತ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕಾಗಿದೆ. ಈ ಸಂಬಂಧ ಅಧಿಕಾರಿಗಳಿಗೆ ಸಮಗ್ರ ಸ್ಥಳ ಪರಿಶೀಲನಾ ವರದಿ ಸಿದ್ಧಪಡಿಸುವಂತೆ ಸೂಚಿಸಿದ್ದು, ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು.
ಮೇಕೆದಾಟು ಸಮತೋಲನ ಜಲಾಶಯ ಯೋಜನೆ ಕುರಿತು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರೊಂದಿಗೆ ಆಗಸ್ಟ್ 3ರಂದು ನಡೆಯಲಿರುವ ಮಾತುಕತೆಯಲ್ಲಿ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವುದು ತನ್ನ ಉದ್ದೇಶ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದು, ಈ ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೇ ಶೇ.80ರಷ್ಟು ಲಾಭವಾಗಲಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.
ಚಿತ್ರದುರ್ಗದಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗ ಮಟ್ಟದ ಅಭಿವೃದ್ಧಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೇಕೆದಾಟು ಯೋಜನೆಯ ಶೇ.80ರಷ್ಟು ಲಾಭ ತಮಿಳುನಾಡಿಗೆ, ಉಳಿದ ಶೇ.20ರಷ್ಟು ಮಾತ್ರ ಕರ್ನಾಟಕಕ್ಕೆ ಸಿಗಲಿದೆ. ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಎಲ್ಲ ವಿಷಯಗಳನ್ನು ಚರ್ಚಿಸಿ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ತುಂಗಭದ್ರಾ ನೀರಿನ ವಿಚಾರದಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ಹೊಸಪೇಟೆಯಲ್ಲಿ ಒಂದೇ ವೇದಿಕೆಗೆ ಕರೆತಂದು ಮೂರು ರಾಜ್ಯಗಳ ರೈತರ ಹಿತದೃಷ್ಟಿಯಿಂದ ಪರಿಹಾರ ಕಂಡುಕೊಂಡಿದ್ದೇನೆ. ಅದೇ ರೀತಿಯಲ್ಲಿ ಮೇಕೆದಾಟು ವಿವಾದಕ್ಕೂ ಪರಿಹಾರ ಕಂಡುಕೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು..
ರಾಜ್ಯದ ವಿವಿಧ ಭಾಗಗಳಿಂದ ಮೋಡ ಬಿತ್ತನೆಗೆ ಆಗ್ರಹ ವ್ಯಕ್ತವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿ, ಸಂಬಂಧಿತ ಇಲಾಖೆಯ ವರದಿ ಬಂದ ನಂತರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.
ಬರ ಘೋಷಣೆಗೆ ನಿಗದಿತ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕಾಗಿದೆ. ಈ ಸಂಬಂಧ ಅಧಿಕಾರಿಗಳಿಗೆ ಸಮಗ್ರ ಸ್ಥಳ ಪರಿಶೀಲನಾ ವರದಿ ಸಿದ್ಧಪಡಿಸುವಂತೆ ಸೂಚಿಸಿದ್ದು, ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ಬಳಿಕ ಕೇಂದ್ರದ ತಂಡ ಭೇಟಿ ನೀಡಿದ ನಂತರವೇ ಬರ ಘೋಷಣೆ ಮಾಡಲಾಗುವುದು. "ಯಾರ ಒತ್ತಡಕ್ಕೂ ಮಣಿದು ಬರ ಘೋಷಣೆ ಮಾಡುವುದಿಲ್ಲ," ಎಂದು ಸ್ಪಷ್ಟಪಡಿಸಿದರು.
ಸೋಮವಾರ ರಾಜ್ಯದ ಹಿರಿಯ ಸಚಿವರೊಂದಿಗೆ ಕರ್ನಾಟಕದ ಸಂಸದರನ್ನು ಭೇಟಿ ಮಾಡಿ, ಬರ ಪರಿಸ್ಥಿತಿಯ ವಿಚಾರವನ್ನು ಸಂಸತ್‌ನಲ್ಲಿ ಪ್ರಸ್ತಾಪಿಸುವಂತೆ ಮನವಿ ಮಾಡಲಾಗುವುದು.
ಬರ ಘೋಷಣೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಬೇಕು ಎಂಬ ಬೇಡಿಕೆಯನ್ನು ಮುಂದಿಡಲಾಗುವುದು. ಅಗತ್ಯವಿದ್ದರೆ ಸರ್ವಪಕ್ಷಗಳ ನಿಯೋಗವನ್ನು ದೆಹಲಿಗೆ ಕರೆದೊಯ್ಯುವುದಾಗಿಯೂ ಹೇಳಿದರು.