ಬೈಲಹೊಂಗಲ: ನಗರದ ಬೈಪಾಸ್ ರಸ್ತೆಯ ಸಾಯಿ ನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಜುಲೈ 29ರಂದು ಬುಧವಾರ 66ನೇ ಗುರುಪೌರ್ಣಿಮೆ ಉತ್ಸವವನ್ನು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದು ಮಂದಿರದ ಆಡಳಿತ ಮಂಡಳಿ ತಿಳಿಸಿದೆ.
ಉತ್ಸವದ ಅಂಗವಾಗಿ ಬೆಳಿಗ್ಗೆ 5.30ಕ್ಕೆ ಕಾಕಡ ಆರತಿ, ಮಂಗಳಸ್ನಾನ, ಮಹಾಭಿಷೇಕ, ಅಲಂಕಾರ ಪೂಜೆ ಹಾಗೂ ಮಹಾರತಿ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ 'ಶ್ರೀ ಸಾಯಿ ಸಚ್ಚರಿತ್ರೆ' ಪಾರಾಯಣ ಮುಕ್ತಾಯ ಸಮಾರಂಭ ಜರುಗಲಿದ್ದು, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಬಳಿಕ ಭಕ್ತರಿಗೆ ಮಹಾಪ್ರಸಾದ ವಿತರಣೆ ಮಾಡಲಾಗುವುದು.
ಶ್ರೀ ಸಾಯಿ ಮಂದಿರದ ಸಂಸ್ಥಾಪಕರಾದ ದಿ. ಲಕ್ಷ್ಮಣರಾವ ಯಮನಪ್ಪ ಕಲಕುಟಕರ ಅವರ ಸ್ಮರಣೆಯಲ್ಲಿ ನಡೆಯುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಯಿ ಭಕ್ತರು ಭಾಗವಹಿಸಿ ಗುರುಕೃಪೆಗೆ ಪಾತ್ರರಾಗುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ.
ಮಹಾಪ್ರಸಾದಕ್ಕೆ ಕಾಣಿಕೆ ಅಥವಾ ಸಾಮಗ್ರಿಗಳ ರೂಪದಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಭಕ್ತರು ಮಂದಿರದ ಕಚೇರಿಯಲ್ಲಿ ಸಲ್ಲಿಸಿ ರಸೀದಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 96637 12805 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಶ್ರೀ ಶಿರಡಿ ಸಾಯಿ ಸೇವಾ ಸಮಿತಿ (ರಿ) ಅಧ್ಯಕ್ಷ ಅರವಿಂದ ಲಕ್ಷ್ಮಣರಾವ ಕಲಕುಟಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.