ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಲು ಒತ್ತಾಯಿಸಿ ಕಳೆದ ಮಾರ್ಚ 26 ರಿಂದ ಸುಮಾರು 15 ಕನ್ನಡ ಪರ ಸಂಘಟನೆಗಳು ಹೋರಾಟ ನಡೆಸಿರುವುದು ತಮಗೆ ಗೊತ್ತಿದೆ. 2005 ಅಕ್ಟೋಬರ್ 27 ರಂದು ಪಾಲಿಕೆಯಲ್ಲಿ ಮಹಾರಾಷ್ಟ್ರ ಪರವಾದ ಗೊತ್ತುವಳಿ ಅಂಗೀಕರಿಸಿದ್ದು ಇದನ್ನು ಮಹಾರಾಷ್ಟ್ರ ಸರಕಾರ ಸುಪ್ರೀಂ ಕೋರ್ಟ್ ಮುಂದಿರುವ ಗಡಿವಿವಾದ ಪ್ರಕರಣದಲ್ಲಿ ಪೂರಕ ದಾಖಲೆಯನ್ನಾಗಿ ಬಳಸಿದೆ. ಈ ಹಿನ್ನೆಲೆಯಲ್ಲಿ ಸದ್ಯ ಕನ್ನಡಿಗರೇ ಬಹುಮತ ಹೊಂದಿರುವ ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಮಹಾಜನ ಆಯೋಗದ ವರದಿಯೇ ಅಂತಿಮ ಎಂಬ ಗೊತ್ತುವಳಿಯನ್ನು ಅಂಗೀಕರಿಸಿ ಅದನ್ನು ಕರ್ನಾಟಕ ಸರಕಾರ ನ್ಯಾಯಾಲಯದ ಮುಂದೆ ಸಲ್ಲಿಸಬೇಕಾಗಿದೆ.
ಕಳೆದ ಏಪ್ರಿಲ್ 18 ಮತ್ತು ಮೇ 13 ರಂದು ನಡೆದ ಪಾಲಿಕೆಯ ಸಭೆಗಳಲ್ಲಿ ಇಂಥ ನಿರ್ಣಯಗಳನ್ನು ಪಾಸು ಮಾಡಲು ಬಿಜೆಪಿ ಮಹಾಪೌರರು ಮತ್ತು ಉಪಮಹಾಪೌರರು ವಿಫಲರಾಗಿದ್ದಾರೆ. ಕನ್ನಡ ಸಂಘಟನೆಗಳಿಗೆ ಅನೇಕ ಬಾರಿ ನೀಡಿದ ಭರವಸೆಯನ್ನು ಈಡೇರಿಸದೇ ದ್ರೋಹವೆಸಗಿದ್ದಾರೆ.ಪಾಲಿಕೆಯ 58 ಸದಸ್ಯರ ಪೈಕಿ 35 ಸದಸ್ಯರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ನಿರ್ಣಯ ಪಾಸು ಮಾಡದೆ ಇದ್ದರೆ ನಾಡಿನಾದ್ಯಂತದ ಕನ್ನಡ ಸಂಘಟನೆಗಳು ತೀವ್ರ ಪ್ರತಿಭಟನೆ ಆರಂಭಿಸಲಿವೆ.
ಆದ್ದರಿಂದ ತಾವು ಈ ಸಂಬಂಧ ಬಿಜೆಪಿಯ ರಾಜ್ಯಾಧ್ಯಕ್ಷರ ಜೊತೆ ದೂರವಾಣಿಯ ಮೂಲಕ ಚರ್ಚಿಸಿ ಬೆಳಗಾವಿ ಪಾಲಿಕೆಯ ಮಹಾಪೌರರು ಮತ್ತು ಉಪಮಹಾಪೌರರಿಗೆ ಸೂಚನೆ ನೀಡಿ ಕೂಡಲೇ ಪಾಲಿಕೆಯ ವಿಶೇಷ ಸಭೆ ಕರೆದು ಕರ್ನಾಟಕ ಪರವಾದ ಗೊತ್ತುವಳಿ ಪಾಸು ಮಾಡಿಸಬೇಕೆಂದು ತಮ್ಮ ಮೂಲಕ ಒತ್ತಾಯಿಸಬೇಕು ಎಂದು ನಿಮಗೆ ಮನವಿ ಮಾಡುತ್ತೇವೆ.
ಜಯ ಕರ್ನಾಟಕ ಜನಪರ ವೇದಿಕೆಯ ಸರ್ವ ಸದಸ್ಯರು ಉಪಸ್ಥಿತರಿದ್ದರು.