ವಿಕಸಿತ ಭಾರತದತ್ತ ಕೇಂದ್ರ ಬಜೆಟ್ : ಸಂಸದ ಜಗದೀಶ ಶೆಟ್ಟರ್
ವಿತ್ತ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಇವರು ಸನ್: 2026-27 ನೇ ಸಾಲಿಗಾಗಿ ಮಂಡಿಸಿದ ಬಜೆಟ್, ದೇಶವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುವ ಹಾಗೂ ಬಡಪರ, ರೈತಪರ, ಮಹಿಳಾಪರ, ಯುವಕ - ಯುವತಿಯರ ಏಳಿಗೆಗಾಗಿ ರೂಪಿಸಿರುವ ಬಜೆಟ್ ಇದಾಗಿದೆ ಎಂದು ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಜಗದೀಶ ಶೆಟ್ಟರ ಅವರು ತಿಳಿಸಿದ್ದಾರೆ.
ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಶುಪಾಲನೆಗೆ ಉತ್ತೇಜನ ನೀಡಲು ಸಹಾಯಧನ ಘೋಷಿಸಿದೆ. ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡುವುದರೊಂದಿಗೆ, "SHE ಮಾರ್ಟ" ಎಂಬ ವಿಶೇಷ ಯೋಜನೆ ರೂಪಿಸಿ, ನಾರಿ ಶಕ್ತಿಗೆ ಹೆಚ್ಚಿನ ಆದ್ಯತೆ ನೀಡಿದೆ. ಪ್ರತಿ ಜಿಲ್ಲೆಯಲ್ಲಿ ಬಾಲಕಿಯರಿಗೆ ಅನುಕೂಲವಾಗುವ ದಿಶೆಯಲ್ಲಿ ವಸತಿ ನಿಲಯಗಳನ್ನು ಸಹ ತೆರೆಯಲಿದೆ. ದಿವ್ಯಾಂಗರಿಗಾಗಿ "ದಿವ್ಯಾಂಗ ಸಹಾರಾ" ಎಂಬ ಯೋಜನೆ ಸಹ ಜಾರಿಗೆ ತರಲಿದೆ.
2 ಮತ್ತು 3 ಟೈಯರ್ ನಗರಗಳಲ್ಲಿ ಎಂ.ಎಸ್.ಎಂ.ಇ ಸ್ಥಾಪನೆಗೆ ಹೆಚ್ಚು ಉತ್ತೇಜನ ನೀಡಲಾಗಿದ್ದು ಯುವಕ ಯುವತಿಯರಿಗೆ ಉದ್ಯೋಗಾವಕಾಶ ದೊರೆಯುವುದರಲ್ಲಿ ಅನುಕೂಲಕರ ಮತ್ತು ಆತ್ಮ ನಿರ್ಭರ ಭಾರತ ಆಗುವುದರಲ್ಲಿ ಸಹಕಾರಿಯಾಗಲಿದೆ. ಅದರಂತೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಹೆಚ್ಚು ಮಹತ್ವ "ಸೆಮಿ-ಕಂಟಕ್ಟರ್ “ ತಯಾರಿಕಾ ಕ್ಷೇತ್ರಕ್ಕೆ ಹೆಚ್ಚು ಹಣಕಾಸು ಕಾಯ್ದಿರಿಸಲಾಗಿದ್ದು, ಇದರಿಂದ ನಮ್ಮ ರಾಜ್ಯಕ್ಕೆ ಖಂಡಿತವಾಗಿ ಇದರ ಫಲ ಸಿಗಬಹುದಾಗಿದೆ ಎಂದು ಸಂಸದರು ತಿಳಿಸಿದ್ದಾರೆ.
ಪ್ರತಿಸಲದಂತೆ ಈ ಬಾರಿಯೂ ಸಹ ಆರೋಗ್ಯ ಕ್ಷೇತ್ರಕ್ಕೆ ಉತ್ತಮ ಯೋಜನೆ ರೂಪಿಸಿದ್ದು, ಇದರಲ್ಲಿ ಕ್ಯಾನ್ಸರ್ ರೋಗ ಪೀಡಿತರು ಬಳಸುವ ಸುಮಾರು 17 ಔಷಧಗಳ ಮೇಲೆ ಮತ್ತು ಮಧುಮೇಹ ರೋಗದ ಮೇಲಿನ ಕೆಲವು ಔಷದಗಳ ಮೇಲೆ ತೆರಿಗೆ ಸುಂಕದಿಂದ ವಿನಾಯತಿ ನೀಡಲಾಗಿದ್ದು ಸಂತಸದ ವಿಷಯ.
ಶಿಕ್ಷಣ, ಪ್ರವಾಸೋದ್ಯಮ ಇತ್ಯಾದಿ ಕ್ಷೇತ್ರಗಳ ಬೆಳವಣಿಗೆಗೂ ಸಹ ಆದ್ಯತೆ ನೀಡಿದ್ದು, ಒಟ್ಟಾರೆ ಈ ಬಜೆಟ್ ಒಂದು ಪ್ರಬುದ್ಧ, ಪರಿಪೂರ್ಣ, ಹಾಗೂ ಪ್ರಧಾನ ಮಂತ್ರಗಳಾದ ಶ್ರೀ ನರೇಂದ್ರ ಮೋದಿಯವರ "ವಿಕಸಿತ ಭಾರತ" ಯೋಜನೆಯತ್ತ ಕರದೊಯ್ಯವ ಎಲ್ಲ ಅಂಶಗಳನ್ನು ಹೊಂದಿರುವ ಒಂದು ವಿಶೇಷ ಬಜೆಟ್ ಇದಾಗಿದ್ದು, ಇದು ತಮಗೆ ಅತ್ಯಂತ ಸಂತಸ ತಂದಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಸಂಸದರಾದ ಶ್ರೀ ಜಗದೀಶ ಶೆಟ್ಟರ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.