ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾದ ಸಂಸದ ಜಗದೀಶ ಶೆಟ್ಟರ್
ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ ಶೆಟ್ಟರ, ಇವರು ಇಂದು ಕೇಂದ್ರ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವರಾದ ಶ್ರಿ ನಿತಿನ್ ಗಡ್ಕರಿಯವರನ್ನು ನವದೆಹಲಿಯ ನೂತನ ಸಂಸದ ಭವನದ ಅವರ ಕಚೇರಿಯಲ್ಲಿ ಭೇಟಿ ಮಾಡಿ, ಬೆಳಗಾವಿ ಲೋಕಸಭಾ ವ್ಯಾಪ್ತಿಯಡಿ ಕೈಗೊಳ್ಳಬೇಕಾದ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಿದರು.
ಕೇಂದ್ರ ರಸ್ತೆ ಮೂಲಸೌಕರ್ಯ ನಿಧಿ (CRIF):-
ಬೆಳಗಾವಿ ಲೋಕಸಭೆಯ ವ್ಯಾಪ್ತಿಯಲ್ಲಿ ಸುಮಾರು 80.33 ಕಿಮಿ ಉದ್ದದ ರಸ್ತೆಯನ್ನು ಮೂಲಸೌಕರ್ಯ ಕೇಂದ್ರ ರಸ್ತೆ (Central Road Infrastructure Fund), ಯೋಜನೆ ಅಡಿ ಅಂದಾಜು ರೂ: 86.40 ಕೋಟಿ ಅನುದಾನದಲ್ಲಿ ಸುಧಾರಣೆ ಕೈಗೊಳ್ಳಲು ಅವಶ್ಯಕತೆ ಇರುವುದನ್ನು ಗುರುತಿಸಿದ್ದು, ಇವುಗಳ ಸುಧಾರಣೆ ಮಾಡುವ ಕುರಿತು ಅಗತ್ಯ ಅನುಮೋದನೆ ನೀಡುವ ಬಗ್ಗೆ ಸಂಸದರು ಕೇಂದ್ರ ಸಚಿವರಲ್ಲಿ ಪ್ರಸ್ತಾಪಿಸಿದರು.
ಅದರಂತೆ ಗೋಕಾಕದಿಂದ ಯರಗಟ್ಟಿ ಹಾಗೂ ಸವದತ್ತಿ ಮಾರ್ಗವಾಗಿ ಧಾರವಾಡದ ವರೆಗೆ ಈಗಿರುವ ದ್ವಿಪಥ ರಸ್ತೆಯನ್ನು ಚರ್ತುಪಥ ರಸ್ತೆಯನ್ನಾಗಿ ಪರಿವರ್ತಿಸುವುದು ಅವಶ್ಯಕ, ಈ ರಸ್ತೆಯು ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮದೇವಿಯ ದೇವಸ್ಥಾನಕ್ಕೆ ತೆರಳಲು ಏಕೈಕ ಮಾರ್ಗವಾಗಿದ್ದು ವಾಹನ ದಟ್ಟಣೆಯಿಂದ ಕುಡಿರುತ್ತದೆ. ಹೀಗಾಗಿ ವಾಹನ ಅಪಘಾತ ಸರ್ವೆ ಸಾಮಾನ್ಯ, ಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಸಂಚರಿಸುವ ಹಿನ್ನಲೆಯಲ್ಲಿ ಈ ಮಾರ್ಗವನ್ನು ಚರ್ತುಪಥವನ್ನಾಗಿ ಮಾಡುವುದು ತುಂಬಾ ಅವಶ್ಯಕತೆ ಇರುವ ಬಗ್ಗೆ ಸಂಸದರು ಕೇಂದ್ರ ಸಚಿವರಲ್ಲಿ ಮನವರಿಕೆ ಮಾಡಿದರು.
ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರದಿಂದ ವಾಹನ ಟ್ರ್ಯಾಕಿಂಗ್ ವ್ಯವಸ್ಥೆ (Vehicle Tracking System) ಬಲಪಡಿಸುವ ಯೋಜನೆಯಡಿ ಕೇಂದ್ರ ಸರಕಾರದಿಂದ ಸುಮಾರು ರೂ: 25.39 ಕೋಟಿ ಅನುದಾನವನ್ನು ಒದಗಿಸುವ ಬಗ್ಗೆ ಪ್ರಸ್ತಾವನೆ ರಾಜ್ಯ ಸರಕಾರದಿಂದ ಕೇಂದ್ರ ಸಚಿವಾಲಯಕ್ಕೆ ಕಳುಹಿಸಿದ್ದು, ಇದಕ್ಕೆ ಅನುಮೊದನೆ ನೀಡುವಂತೆ ಸಂಸದರು ಕೋರಿದರು.
ಮುಂದುವರೆದು ಇದೇ ಸಂಸ್ಥೆಯಲ್ಲಿ ಮಹಿಳೆಯರಿಗೆ ಸುರಕ್ಷತೆ ಒದಗಿಸುವ ದೃಷ್ಟಿಕೊನದಿಂದ ಸುಮಾರು 1000 ಬಸ್ಸುಗಳಲ್ಲಿ, ಬಸ್ ಡಿಪೋಗಳಲ್ಲಿ, ಬಸ್ ನಿಲ್ದಾಣದಲ್ಲಿ, ವಿಭಾಗೀಯ ಕಚೇರಿಯಲ್ಲಿ ಕೇಂದ್ರ ಸರಕಾರದ - "ನಿರ್ಭಯ ನಿಧಿ" ಯೋಜನೆಯಡಿ ಕ್ಯಾಮರಾ ಅಳವಡಿಸುವ ಕುರಿತಾದ ಸುಮಾರು ರೂ: 59.13 ಕೋಟಿ ಅನುದಾನದ ಯೋಜನೆ/ಪ್ರಸ್ತಾವನೆ ತಮ್ಮ ಸಚಿವಾಲಯಕ್ಕೆ ಬಂದಿರುವ ಬಗ್ಗೆ ತಿಳಿಸಿ, ನಮ್ಮ ಮತಕ್ಷೇತ್ರದ ಮಹಿಳೆಯ ಸುರಕ್ಷತಾ ಹಿತಾದೃಷ್ಠಿಯಿಂದ ಶೀಘ್ರ ಅನುಮೋದನೆಗೆ ಸಂಸದರು ಕೇಂದ್ರ ಸಚಿವರಲ್ಲಿ ಕೋರಿದರು.
ಮೇಲೆ ಪ್ರಸ್ತಾಪಿತ ಎಲ್ಲ ವಿಷಯಗಳಿಗೂ ಸಂಸದರು ಅರ್ಪಿಸಿದ ಪ್ರತ್ಯೇಕ ಮನವಿಗಳನ್ನು ಅವಲೋಕಿಸಿದ ಶ್ರೀ ನಿತಿನ್ ಗಡ್ಕರಿಯವರು ಇವೆಲ್ಲ ವಿಷಯಗಳನ್ನು ಅವರು ಅಗತ್ಯ ಅವಲೋಕಿಸುವುದಾಗಿ ಫಲಧಾಯಕವಾದ ನಿರ್ಣಯವನ್ನು ಅವಶ್ಯ ಕೈಗೊಳ್ಳುವುದಾಗಿ ಭರವಸೆಯನ್ನು ತಮಗೆ ನೀಡಿರುವ ಬಗ್ಗೆ ಬೆಳಗಾವಿ ಲೋಕಸಭಾ ಸದಸ್ಯರಾದ ಶ್ರೀ ಜಗದೀಶ ಶೆಟ್ಟರ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.