ಅಕ್ಟೋಬರ್ 02: ಅಧಿಕಾರಕ್ಕಾಗಿ ತೊಡೆ ತಟ್ಟುವ ಸ್ವಪಕ್ಷೀಯರನ್ನು ಸುಮ್ಮನಾಗಿಸಲು ಸೈಟ್ ಹಿಂತಿರುಗಿಸುವ ಈ ರಾಜಕೀಯ ನಾಟಕ ಮಾಡುತ್ತಿದ್ದಾರೆ ಎಂದು ದೂರಿದರು. ಮುಖ್ಯಮಂತ್ರಿಗಳು ಯಾವುದೇ ಕ್ಷಣದಲ್ಲಿ ರಾಜೀನಾಮೆ ಕೊಡಬಹುದು. ಇದು ಕೆಲವೇ ಗಂಟೆಗಳಲ್ಲಿ ಆದರೂ ಅಚ್ಚರಿಯಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಹೈಕೋರ್ಟ್ ತೀರ್ಪು, ಜನಪ್ರತಿನಿಧಿಗಳ ಕೋರ್ಟಿನ ಆದೇಶದ ಬಳಿಕ ನಿನ್ನೆ ಇ.ಡಿ. ಕೇಸು ದಾಖಲಾಗಿದೆ. ರಾಜ್ಯಪಾಲರು ದೆಹಲಿಯ ಕೈಗೊಂಬೆ ಎನ್ನುತ್ತಿದ್ದ ಸಿದ್ದರಾಮಯ್ಯನವರು ನಿವೇಶನ ವಾಪಸ್ ನೀಡುತ್ತಿರುವುದು ಕಾನೂನಿನ ಕುಣಿಕೆಯಿಂದ ಪಾರಾಗುವ ಉದ್ದೇಶದಿಂದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಹೇಳಿದರು.
ಸಿದ್ದರಾಮಯ್ಯನವರು ತಪ್ಪು ಮಾಡಿದ್ದನ್ನು ಅಧಿಕೃತವಾಗಿ ಒಪ್ಪಿಕೊಂಡಂತಾಗಿದೆ. 2011ರಲ್ಲಿ ಅಂದಿನ ಸಿಎಂ ಆಗಿದ್ದ ಯಡಿಯೂರಪ್ಪ ಅವರ ವಿರುದ್ಧ ಆರೋಪ ಬಂದಿತ್ತು. ಆಗ, ತಪ್ಪು ಮಾಡದಿದ್ದರೆ ಯಾಕೆ ಸೈಟ್ ಸರೆಂಡರ್ ಮಾಡಿದ್ದಾರೆ ಎಂದು ಸಿದ್ದರಾಮಯ್ಯನವರು ಪ್ರಶ್ನಿಸಿದ್ದರು ಎಂದರು.
ಕಳಂಕ, ಆರೋಪಿ ಸ್ಥಾನದಲ್ಲಿರುವ ಸಿದ್ದರಾಮಯ್ಯನವರು ಇನ್ನಾದರೂ ತಮ್ಮ ಭಂಡತನವನ್ನು ಬಿಟ್ಟು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಲ್ಲದೆ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಮೊದಲು ಗೌರವಾನ್ವಿತ ರಾಜ್ಯಪಾಲರ ಕ್ಷಮೆ ಕೇಳಬೇಕು. ಸಾಮಾಜಿಕ ಕಾರ್ಯಕರ್ತ, ಬಡ ಕುಟುಂಬದವರಾದ ಸ್ನೇಹಮಯಿ ಕೃಷ್ಣರ ಮೇಲೆ ದೂರು ದಾಖಲಿಸಿ ಅವರನ್ನು ಬೆದರಿಸುವ ತಂತ್ರವನ್ನು ಮುಖ್ಯಮಂತ್ರಿಗಳು, ಅವರ ಹಿಂಬಾಲಕರು ಮಾಡುತ್ತಿದ್ದಾರೆ. ಗೃಹ ಸಚಿವರು ಮತ್ತು ಡಿಜಿಪಿ ಅವರು ತಕ್ಷಣ ಸ್ನೇಹಮಯಿ ಕೃಷ್ಣ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು.
14 ನಿವೇಶನ ವಾಪಸ್ ಮಾಡುವ ಸಂದರ್ಭ ಬರಲಿದೆ ಎಂದಿದ್ದೆ. ಸಿದ್ದರಾಮಯ್ಯನವರ ಧರ್ಮಪತ್ನಿ ಪಾರ್ವತಿಯವರು ಸಿಎಂ, ಸಿಎಂ ಸುಪುತ್ರರ ಗಮನಕ್ಕೆ ಬರದೇ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಕುಳಿತು ಮುಡಾಕ್ಕೆ ಪತ್ರ ಬರೆದಿದ್ದಾರೆ. 14 ನಿವೇಶನ ವಾಪಸ್ ಕೊಡುವುದಾಗಿ ಹೇಳಿದ್ದಾರೆ. ಪಾರ್ವತಿಯವರು ಅವರಾಗಿಯೇ ಈ ಪತ್ರ ಬರೆದರೇ? ಬಲವಂತವಾಗಿ ಬರೆದರೋ ನಮಗೆ ಗೊತ್ತಿಲ್ಲ. ತಪ್ಪೇ ಮಾಡಿಲ್ಲ, ನಾನು ಜಗ್ಗುವುದಿಲ್ಲ; ನಾನು ಬಗ್ಗುವುದಿಲ್ಲ. ಇದೆಲ್ಲ ರಾಜಕೀಯಪ್ರೇರಿತ ಎಂದು ಆರ್ಭಟಿಸುತ್ತಿದ್ದ ಮುಖ್ಯಮಂತ್ರಿಯವರು 62 ಕೋಟಿ ಕೊಡ್ತಾರ ನನಗೆ, ನಾನ್ಯಾಕೆ ಸೈಟ್ ವಾಪಸ್ ಕೊಡಲಿ ಎಂದಿದ್ದರು ಎಂದು ಹೇಳಿದರು.