ಆರೋಪಿ ಶ್ರೀ ಬಸವರಾಜ ನಾಗರಾಳ ನೇಮಕಕ್ಕೆ : ಸಂಸದ ಜಗದೀಶ ಶೆಟ್ಟರ ವಿರೋಧ
ಬೆಳಗಾವಿ ನೌಕರರಿಗೆ ಕಿರುಕುಳ ನೀಡಿ, ಒಬ್ಬ ಸಿಬ್ಬಂದಿಯ ಆತ್ಮಹತ್ಯೆಗೆ ಕಾರಣೀಭೂತರಾಗಿ ಆರೋಪಿ ಸ್ಥಾನದಲ್ಲಿರುವ ಬೆಳಗಾವಿ ತಹಶೀಲ್ದಾರಾಗಿ ಆಗ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಬಸವರಾಜ ನಾಗರಾಳ ಅವರನ್ನು ಮತ್ತೆ ಅದೇ ಸ್ಥಾನಕ್ಕೆ ನೇಮಕ ಮಾಡಲು ರಾಜ್ಯ ಸರ್ಕಾರ ಮುಂದಾಗಿರುವ ಕ್ರಮಕ್ಕೆ ಬೆಳಗಾವಿ ಲೋಕಸಭಾ ಸಂಸದರು ಹಾಗೂ ಕರ್ನಾಟಕ ರಾಜ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ ಶೆಟ್ಟರ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಎಸ್‍ಡಿಸಿ ಶ್ರೀ ರುದ್ರಣ್ಣ ಅವರ ಆತ್ಮಹತ್ಯೆಗೆ ಬಸವರಾಜ ನಾಗರಾಳ ಅವರೇ ಕಾರಣ ಎಂಬ ಆರೋಪ ಎದುರಿಸುತ್ತಿರುವ ಅದೇ ತಹಶೀಲ್ದಾರ ಅವರನ್ನು ಬೆಳಗಾವಿ ಕಚೇರಿಯ ಪುನರ್ ನೇಮಕ ಮಾಡುವುದರ ಹಿಂದಿನ ಮರ್ಮವೇನು? ಬೆಳಗಾವಿಯಲ್ಲಿ ಕೆಲಸ ಮಾಡಲು ಸಮರ್ಥವಾದ ಬೇರೆ ತಹಶೀಲ್ದಾರರು ಸರ್ಕಾರದಲ್ಲಿ ಯಾರು ಇಲ್ಲವೇ? ಎಂದು ಸಂಸದರಾದ ಶ್ರೀ ಜಗದೀಶ ಶೆಟ್ಟರ ಅವರು ಪ್ರಶ್ನಿಸಿದ್ದಾರೆ.
ಪ್ರಕರಣ ಇತ್ಯರ್ಥವಾಗುವವರೆಗೆ ಯಾವುದೇ ಕಾರಣಕ್ಕೂ ಅದೇ ಹುದ್ದೆಗೆ ಹಿಂದಿನ ತಹಶೀಲ್ದಾರನ್ನು ನೇಮಕ ಮಾಡಬಾರದು ಎಂದು ಮುಖ್ಯಮಂತ್ರಿಗಳಿಗೆ, ಕಂದಾಯ ಸಚಿವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿದ್ದು, ಮತ್ತೆ ಇಂತಹ ಅಧಿಕಾರಿಗಳನ್ನು ನೇಮಕ ಮಾಡುತ್ತಿರುವುದರಿಂದ ನೌಕರರಿಗೆ ಕಿರುಕುಳ ನೀಡುವ ಅಧಿಕಾರಿಗಳಿಗೆ ಮಣೆ ಹಾಕಿದಂತಾಗುವುದು. ಇದರಿಂದ ಇನ್ನುಳಿದ ನೌಕರರಿಗೂ ತಪ್ಪು ಸಂದೇಶ ಹೋಗುತ್ತದೆ. ಅಲ್ಲದೆ ಈ ತಹಶೀಲ್ದಾರರ ಕಾರ್ಯವೈಖರಿಯನ್ನು ಖಂಡಿಸಿ ಅನೇಕ ಸಂಘಟನೆಗಳು ಕೂಡ ವಿರೋಧ ವ್ಯಕ್ತಪಡಿಸಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಶ್ರೀ ಜಗದೀಶ ಶೆಟ್ಟರ ಇವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಭ್ರಷ್ಟ ಅಧಿಕಾರಿಗಳಿಗೆ ಮಣೆ ಹಾಕುವುದನ್ನು ಬಿಟ್ಟು ಜನಾನುರಾಗಿ, ಪ್ರಮಾಣಿಕ ಅಧಿಕಾರಿಯನ್ನು ಬೆಳಗಾವಿ ತಹಶೀಲ್ದಾರ ಹುದ್ದೆಗೆ ನೇಮಕ ಮಾಡಬೇಕು ಎಂದು ಸಂಸದರು ಒತ್ತಾಯಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ದ್ವಿತೀಯ ದರ್ಜೆ ಸಹಾಯಕ ಶ್ರೀ ರುದ್ರಣ್ಣನವರ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೆ ಸರ್ಕಾರ ಯಾವುದೇ ಕಾರಣಕ್ಕೂ ಬೆಳಗಾವಿಗೆ ಮತ್ತೆ ಅಧಿಕಾರಿ ಬಸವರಾಜ ನಾಗರಾಳ ಅವರನ್ನು ನೇಮಕ ಮಾಡಬಾರದೆಂದು ಬೆಳಗಾವಿ ಲೋಕಸಭಾ ಸದಸ್ಯರಾದ ಶ್ರೀ ಜಗದೀಶ ಶೆಟ್ಟರ ಅವರು ಒತ್ತಾಯಿಸಿದ್ದಾರೆ.