
ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಮಲೆಮಾದೇಶ್ವರ ಬೆಟ್ಟ ಏರಿದ 102 ವರ್ಷದ ಅಜ್ಜಿ
ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದಕ್ಕಾಗಿ ಭಾರಿ ತಯಾರಿಗಳು ಈಗಾಗ್ಲೇ ಆರಂಭಗೊಂಡಿವೆ. ರಾಜಕಾರಣಿಗಳು , ಕಾರ್ಯಕರ್ತರು ತೆರೆ ಮರೆಯಲ್ಲಿಯೇ ನಾನಾ ರೀತಿಯ ಪ್ಲ್ಯಾನ್ ಗೆ ರೆಡಿಯಾಗುತ್ತಿದ್ದಾರೆ. ಹೀಗಿರುವಾಗ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಹಲವರು ಕನಸು ಕಾಣುತ್ತಿದ್ದಾರೆ. ಅದರಲ್ಲಿ ಇಲ್ಲೊಬ್ಬರು ಅಜ್ಜಿ ಮೋದಿಗಾಗಿ ಮಲೆಮಾದೇಶ್ವರ ಬೆಟ್ಟಕ್ಕೆ ಹರಕೆ ಕಟ್ಟಿಕೊಂಡು ಬೆಟ್ಟ ಹತ್ತಿದ ಘಟನೆಯೊಂದು ಬೆಳಕಿಗೆ ಬಂದಿದೆ.
102 ವರ್ಷದ ಅಜ್ಜಿ ಈ ಸಾಹಸ ಮಾಡಿದ್ದು ಅಚ್ಚರಿಯನ್ನುಂಟು ಮಾಡಿದೆ. ಅಜ್ಜಿಯು ಕಾಲು ನಡಿಗೆಯ ಮೂಲಕ ಕಾಡು ದಾರಿಯಲ್ಲಿ ಬೆಟ್ಟ ಹತ್ತಿದ್ದಾರೆ. ಮೋದಿ ಗೆಲ್ಲಬೇಕು, ದೇಶಕ್ಕೆ ಒಳ್ಳೆದು ಮಾಡಬೇಕು ಎಂದು ಹೇಳುತ್ತಾ ಬೆಟ್ಟ ಏರಿದ್ದಾರೆ. ಇವರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲಿ ಅಜ್ಜಿ “ದೇಶಕ್ಕೆ ಒಳ್ಳೆದಾಗಬೇಕು, ರೈತರಿಗೆ ಒಳ್ಳೆದಾಗಬೇಕು, ಕಾಡು ಪ್ರಾಣಿಗಳಿಗೆ ನೀರಿಲ್ಲ. ದೇಶನೂ ಉದ್ಧಾರ ಆಗುತ್ತೆ. ಮೋದಿ ಬರ್ಬೇಕು” ಎಂದು ಹೇಳಿದ್ದಾರೆ. ಇದಕ್ಕೆ ಅಲ್ಲಿ ನೆರೆದಿದ್ದವರು ಚಪ್ಪಾಳೆ ತಟ್ಟುತ್ತಾ, ಸೂಪರ್ ಅಜ್ಜಿ ಎಂದು ಜೋರಾಗಿ ಕೂಗಿದ್ದಾರೆ. ಸದ್ಯ ಟ್ವಿಟ್ಟರ್ ನಲ್ಲಿ ಈ ವೀಡಿಯೋ ವೈರಲ್ ಆಗಿದೆ.