ಕಾಂಗ್ರೆಸ್ ಸರ್ಕಾರವು ರಾಜಕೀಯ ದ್ವೇಷಕ್ಕಾಗಿ ಇಂತಹ ಗೂಂಡಾ ಪ್ರವೃತ್ತಿಗೆ ಕುಮ್ಮಕ್ಕು ನೀಡುತ್ತಿರುವುದು ಸರಿಯಲ್ಲ : ಜಗದೀಶ ಶೆಟ್ಟರ ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಕಾಂಗ್ರೆಸ್ ಸರ್ಕಾರವು ರಾಜಕೀಯ ದ್ವೇಷಕ್ಕಾಗಿ ಇಂತಹ ಗೂಂಡಾ ಪ್ರವೃತ್ತಿಗೆ ಕುಮ್ಮಕ್ಕು ನೀಡುತ್ತಿರುವುದು ಸರಿಯಲ್ಲ : ಜಗದೀಶ ಶೆಟ್ಟರ 

ಬಳ್ಳಾರಿಯಲ್ಲಿ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಶ್ರೀ ಜಿ. ಜನಾರ್ದನ ರೆಡ್ಡಿ ಅವರ ನಿವಾಸದ ಮುಂದೆ ಕಾಂಗ್ರೆಸ್ ಶಾಸಕರ ಆಪ್ತರು ನಡೆಸಿರುವ ದಾಂಧಲೆ ಮತ್ತು ಗೂಂಡಾವರ್ತನೆ ಅತ್ಯಂತ ಖಂಡನೀಯ ಹಾಗೂ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ 

ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಬಳ್ಳಾರಿಯ ಘಟನೆಯೇ ಸಾಕ್ಷಿ. ಒಬ್ಬ ಶಾಸಕರ ನಿವಾಸದ ಮುಂದೆಯೇ ಖಾಸಗಿ ಗನ್‌ಮ್ಯಾನ್‌ಗಳನ್ನು ಬಳಸಿಕೊಂಡು ಗುಂಡು ಹಾರಿಸುವ ಧೈರ್ಯ ಗೂಂಡಾಗಳಿಗೆ ಬಂದಿದೆ ಎಂದರೆ, ರಾಜ್ಯದಲ್ಲಿ ಜನಸಾಮಾನ್ಯರ ಗತಿ ಏನು? ಪೊಲೀಸರು ಕಾಂಗ್ರೆಸ್ ಕೈಗೊಂಬೆಗಳಂತೆ ವರ್ತಿಸುತ್ತಿರುವುದು ದುರದೃಷ್ಟಕರ.

ಬಳ್ಳಾರಿಯ ಕಾಂಗ್ರೆಸ್ ಶಾಸಕರ ನೇತೃತ್ವದಲ್ಲೇ ಈ ದಾಂಧಲೆ ನಡೆದಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಅಧಿಕಾರದ ಮದದಿಂದ ಕಾಂಗ್ರೆಸ್ ಶಾಸಕರು ಮತ್ತು ಅವರ ಬೆಂಬಲಿಗರು ರೌಡಿಗಳಂತೆ ವರ್ತಿಸುತ್ತಿದ್ದಾರೆ. ರಾಜಕೀಯವಾಗಿ ಎದುರಿಸಲಾಗದೆ, ಬಿಜೆಪಿ ನಾಯಕರ ಮತ್ತು ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುವುದು ಹೇಡಿತನದ ಪರಮಾವಧಿ.

ಶಾಸಕರ ಆಪ್ತರು ಖಾಸಗಿ ಗನ್‌ಮ್ಯಾನ್‌ಗಳನ್ನು ಬಳಸಿಕೊಂಡು ಗಾಳಿಯಲ್ಲಿ ಗುಂಡು ಹಾರಿಸಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿರುವುದು ಗಂಭೀರವಾದ ಅಪರಾಧ. ಕೂಡಲೇ ಅಂತಹ ವ್ಯಕ್ತಿಗಳ ಪರವಾನಗಿಯನ್ನು ರದ್ದುಗೊಳಿಸಬೇಕು ಮತ್ತು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.

ಬಳ್ಳಾರಿ ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೆ ತಕ್ಷಣವೇ ತಪ್ಪಿತಸ್ಥರನ್ನು ಬಂಧಿಸಬೇಕು. ಬಿಜೆಪಿ ಕಾರ್ಯಕರ್ತರ ಮೇಲೆ ಕೈಹಾಕಿದರೆ ನಾವು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಸಂಸದರಾದ ಜಗದೀಶ್ ಶೆಟ್ಟರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)