ಬೆಳಗಾವಿ : ಡಿಸಿಸಿ ಬ್ಯಾಂಕ್ ಚುನಾವಣೆ ಗ್ರಾಮೀಣ ರೈತರ ಹಾಗೂ ಬಡ ಕಾರ್ಮಿಕರ ಏಳಿಗೆಗೆ ಶ್ರಮಿಸುವ ಬ್ಯಾಂಕ್ ನ ನಿರ್ದೇಶಕರ ಚುನಾವಣೆ ಆಗಿದ್ದು, ಈ ಚುನಾವಣೆಯಲ್ಲಿ ಸಂಪೂರ್ಣವಾಗಿ ರೈತರು ಸಕ್ರಿಯವಾಗಿ ಭಾಗಿಯಾಗಬೇಕು. ರಾಜಕೀಯ ವ್ಯಕ್ತಿಗಳು ಇದರಲ್ಲಿ ಬರಬಾರದು ಎಂದು ರಾಷ್ಟ್ರೀಯ ರೈತ ಸಂಘದ ಅಧ್ಯಕ್ಷ ಪ್ರಕಾಶ ನಾಯಕ ಹೇಳಿದ್ದಾರೆ.
ಗುರುವಾರ ದಿನಾಂಕ 11/09/2025 ರಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಚುನಾವಣೆಯಲ್ಲಿ ಭ್ರಷ್ಟ ಜನಪ್ರತಿನಿಧಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ. ಅದೇ ರೀತಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷ ಹಾಗೂ ಜನಪ್ರತಿನಿಧಿಗಳು ಭಾಗಿಯಾಗಬಾರದು, ರಾಜಕಾರಣಿಗಳಿಗೆ ನಿಜವಾಗಿಯೂ ರೈತರ ಮೇಲೆ ಗೌರವ ಇರುವದಾದರೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಕೂಡದು ಒಂದು ವೇಳೆ ಭಾಗಿಯಾದರೆ ಅವರನ್ನು ಬಹಿಷ್ಕರಿಸಲಾಗುವುದು ಎಂದರು.
ಡಿಸಿಸಿ ಬ್ಯಾಂಕ್ ಚುನಾವಣೆಗಾಗಿ ಖಾನಾಪುರ ಹಾಗೂ ಹುಕ್ಕೇರಿ ಭಾಗದಲ್ಲಿ ಪ್ರತಿ ಪಿಕೆಪಿಎಸ್. ಗೆ ರೂ. 25 ಲಕ್ಷದಿಂದ ರೂ. 50 ಲಕ್ಷದವರೆಗೂ ಕುದುರೆ ವ್ಯಾಪಾರ ಹಾಗೂ ಅಪಹರಣ ಪ್ರಕರಣಗಳು ನಡೆಯುತ್ತಿವೆ, ಹೆಂಡತಿಯಿಂದ ಗಂಡನ ಮೇಲೆ ಮಾರಣಾಂತಿಕ ಹಲ್ಲೆ ಹಾಗೂ ಈ ಹಿಂದೆ ಆಡಳಿತ ಮಂಡಳಿಯಿಂದ ನಡೆದ ಅವ್ಯವಹಾರ ಹೀಗೆ ಹಲವಾರು ಕಾನೂನುಬಾಹಿರ ಕೃತ್ಯಗಳು ನಡೆಯುತ್ತಿವೆ ಎಂದು ಆರೋಪಿಸಿದರು.
ಅಸಂವಿಧಾನಾತ್ಮಕ, ಪ್ರಜಾಪ್ರಭುತ್ವ ವಿರೋಧಿ ಹಾಗೂ ಚುನಾವಣಾ ನೀತಿ ಸಂಹಿತಿ ವಿರೋಧಿಯಾಗಿ ಕಾರ್ಯಗಳು ನಡೆಯುತ್ತಿದ್ದು, ಈ ರೀತಿಯ ಇನ್ನು ಹಲವಾರು ವಿದ್ಯಮಾನಗಳನ್ನು ನಿಯಂತ್ರಿಸುವಲ್ಲಿ, ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಸಹಕಾರಿ ರಂಗದಿಂದ ಭ್ರಷ್ಟ ರಾಜಕಾರಣಿಗಳು ದೂರ ಇರಬೇಕು.."