ಬೆಳಗಾವಿ: 1905ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರ ನೇತೃತ್ವದಲ್ಲಿ ಬೆಳಗಾವಿಯ ಮಾರುಕಟ್ಟೆಯೊಂದರಲ್ಲಿ ಮೊದಲ ಸಾರ್ವಜನಿಕ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಈ ಘಟನೆಯು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಘಟ್ಟವಾಗಿದೆ.
ಇದು ಕೇವಲ ಒಂದು ಧಾರ್ಮಿಕ ಹಬ್ಬವಾಗಿರಲಿಲ್ಲ. ಬ್ರಿಟಿಷ್ ವಸಾಹತುಶಾಹಿ ವಿರುದ್ಧ ಜನರನ್ನು ಒಗ್ಗೂಡಿಸುವ ದಿಟ್ಟ ಪ್ರಯತ್ನವಾಗಿತ್ತು. ಕಳೆದ 120 ವರ್ಷಗಳಲ್ಲಿ ಗಣೇಶ ಹಬ್ಬವು ಸಾಕಷ್ಟು ಬದಲಾವಣೆಯನ್ನು ಕಂಡಿದೆ. ಗಣೇಶ ಹಬ್ಬವೆಂಬ ಸಾಂಸ್ಕೃತಿಕ ಪರಂಪರೆಯನ್ನು ಸಮಕಾಲೀನ ಸಾಮಾಜಿಕ ವಿಷಯಗಳೊಂದಿಗೆ ಜೋಡಿಸುವ ಮೂಲಕ ಬೆಳಗಾವಿಯು ಸಾರ್ವಜನಿಕ ಗಣೇಶೋತ್ಸವ ನಡೆಯುವ ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ.
ದೇಶಭಕ್ತಿಯ ಭಾಗವಾಗಿ ಆರಂಭವಾದ ಈ ಉತ್ಸವವು ಇಂದು ಬೃಹತ್ ಆಚರಣೆಯಾಗಿ ಬೆಳೆದಿದೆ. ಇಂದು 370 ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಉತ್ಸವ ಮಂಡಲಗಳು ನಗರದಾದ್ಯಂತ ಗಣೇಶನನ್ನು ಪ್ರತಿಸ್ಥಾಪಿಸುತ್ತವೆ. ಅವುಗಳಲ್ಲಿ ಕೆಲ ಮಂಡಲಗಳಿಗೆ 75ಕ್ಕೂ ಹೆಚ್ಚು ವರ್ಷಗಳು ತುಂಬಿವೆ. ಕೆಲ ಮಂಡಲಗಳು ಶತಕದ ಗಡಿಯಲ್ಲಿವೆ.
ಪ್ರತಿಯೊಂದು ಮಂಡಲವು ಹಬ್ಬದ ಸಿದ್ಧತೆಯಲ್ಲಿ ಮುಳುಗಿವೆ. ಆಚರಣೆಯಲ್ಲಿ ಚಿಂನತನಶೀಲವಾದ ಹಾಗೂ ಗಂಭೀರವಾದ ವಿಷಯಗಳಿರುತ್ತವೆ. ಹಿಂದೂ ಧರ್ಮಗ್ರಂಥಗಳು, ಆಧುನಿಕ ಯುಗ, ಸಾಮಾಜಿಕ ಸಮಸ್ಯೆಗಳು ಹಾಗೂ ಪರಿಸರ ಜಾಗೃತಿಯನ್ನು ಮೂಡಿಸುವ ವಿಭಿನ್ನ ವಿಷಯಗಳಿಂದ ಕೂಡಿರುತ್ತವೆ.
ಬೆಳಗಾವಿಯ ಪ್ರತಿ ಮಂಡಲಗಳು ವಿಭಿನ್ನವಾದ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮಗಳನ್ನು ಸಮುದಾಯದ ಜನರಿಗಾಗಿ ಆಯೋಜಿಸುತ್ತವೆ. ಜಿಲ್ಲೆಯಾದ್ಯಂತ ಹಾಗೂ ನೆರೆಯ ರಾಜ್ಯಗಳಾದ ಗೋವಾ ಮತ್ತು ಮಹಾರಾಷ್ಟ್ರದಿಂದಲೂ ಪ್ರವಾಸಿಗರು ಈ ಭವ್ಯ ಪ್ರದರ್ಶನಗಳನ್ನು ವೀಕ್ಷಿಸಲು ನಗರಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಬೆಳಗಾವಿಯು ರೋಮಾಂಚಕ ಹಾಗೂ ಅರ್ಥಪೂರ್ಣವಾದ ಗಣೇಶ ಉತ್ಸವಕ್ಕೆ ಸಜ್ಜಾಗುತ್ತಿದೆ. ಕೇವಲ ಎತ್ತರದ ಮೂರ್ತಿಗಳೊಂದಿಗೆ ಮಾತ್ರವಲ್ಲದೆ, ಏಕತೆ, ಸಂಸ್ಕೃತಿ ಮತ್ತು ಪ್ರಗತಿಯನ್ನು ಪ್ರೇರೇಪಿಸುವ ಉನ್ನತ ಪರಂಪರೆಯೊಂದಿಗೆ ಗಣೇಶ ಮೂರ್ತಿಗಳು ತಲೆ ಎತ್ತಿ ನಿಂತಿದೆ.