ಏಪ್ರಿಲ್ 10 : ನಮ್ಮದು ಹಳ್ಳಿಗಳ ಮತ್ತು ರೈತರ ದೇಶ. ಗ್ರಾಮಗಳು ಮತ್ತು ರೈತರು ನೆಮ್ಮದಿಯಾಗಿ ಉತ್ಪಾದನೆಯಲ್ಲಿ ತೊಡಗಬೇಕಾದರೆ ಸರ್ವೇ ಕಾರ್ಯ ಸರಿಯಾಗಿ ಪೂರ್ಣಗೊಳ್ಳಬೇಕು. ಕೆರೆ ಕಟ್ಟೆಗಳ ಒತ್ತುವರಿ ತೆರವುಗೊಳಿಸಬೇಕು, ಪೋಡಿ ಮುಕ್ತ ಗ್ರಾಮಗಳಾಗಬೇಕು.
ಇದಕ್ಕಾಗಿ ಇಲಾಖೆಯ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಶ್ರಮಿಸಿ, ಧ್ವನಿ ಇಲ್ಲದವರ ಪರವಾಗಿ ಕೆಲಸ ಮಾಡುವುದೇ ನಿಜವಾದ ಪುಣ್ಯದ ಕಾರ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಕಂದಾಯ ಇಲಾಖೆ ಸರ್ಕಾರಕ್ಕೆ ಮಾತೃ ಇಲಾಖೆ ಇದ್ದಂತೆ, ಕಂದಾಯ ಇಲಾಖೆ ರೈತರಿಗೆ ಸಂಪರ್ಕ ಇರುವ ಇಲಾಖೆ, ಜನರ ಕಷ್ಟಗಳಿಗೆ ಸ್ಪಂದಿಸುವ ಇಲಾಖೆ, ಇಲಾಖೆ ಜನರ ಕಷ್ಟಗಳಿಗೆ ಸ್ಪಂದಿಸಿದರೆ ಮಾತ್ರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತವೆ, ಮುಂದಿನ 2 ವರ್ಷದಲ್ಲಿ ಸಂಪೂರ್ಣ ಪೋಡಿ ಮುಕ್ತ ಗ್ರಾಮಗಳಾಗಬೇಕು. ಇದಕ್ಕೆ ಸರ್ಕಾರದಿಂದ ಸಂಪೂರ್ಣ ಸಹಕಾರ ಸಿಗುತ್ತದೆ ಎಂದರು.
ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ನಡೆದ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಇಲಾಖೆಯ ನೌಕರರ ಸಂಘಗಳ 36ನೇ ರಾಷ್ಟ್ರೀಯ ಭೂಮಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಒಂದೂವರೆ ವರ್ಷದಲ್ಲಿ 26 ಲಕ್ಷ ಸರ್ವೇ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದ್ದಕ್ಕೆ ಸಚಿವರಿಗೆ ಮೆಚ್ಚುಗೆ ಕಂದಾಯ ಇಲಾಖೆ ಸರ್ಕಾರದ ಮಾತೃ ಇಲಾಖೆ ರೀತಿ ಇದೆ. ಈ ಇಲಾಖೆ ಅಚ್ಚುಕಟ್ಟಾಗಿ ಕೆಲಸ ಮಾಡಿದರೆ ರೈತ ಸಮುದಾಯ ನೆಮ್ಮದಿಯಾಗಿರುತ್ತದೆ.