ಬೈಲಹೊಂಗಲ: ತಾಲೂಕಿನಾದ್ಯಂತ ಅತಿಯಾದ ಮಳೆಯಿಂದ ರೈತರು ಬೆಳೆದ ಬೆಳೆ ಕೈಗೆ ಬರದಂತಾಗಿದೆ ಮತ್ತು ಹಿಂಗಾರಿಗೆ ಬಿತ್ತಿದ ಬೀಜವೂ ಕೂಡ ಮಳೆಗೆ ಕೊಚ್ಚಿ ಹೋಗಿ ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾದ ಕಾರಣ ಸರಕಾರ ತುರ್ತಾಗಿ ಸಮೀಕ್ಷೆ ನಡೆಸಿ ಪ್ರತಿ ಎಕರೆಗೆ 20 ಸಾವಿರ ಪರಿಹಾರ ಘೋಷಿಸಬೇಕೆಂದು ಭಾರತೀಯ ಕಿಸಾನ್ ಸಂಘ ಬೈಲಹೊಂಗಲ ಘಟಕದ ಅಧ್ಯಕ್ಷ ಮಹಾಂತೇಶ ಹೊಂಗಲ ಅವರು ಇಂದು ಬೈಲಹೊಂಗಲದ ಮಾನ್ಯ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸರ್ಕಾರಕ್ಕೆ ಆಗ್ರಹಿಸಿದರು.
ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಶಿವಾನಂದ ಸರದಾರ ಮಾತನಾಡಿ ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸ ಬೇಕು ಮತ್ತು ಡ್ಯಾಮೇಜ್ ಪರ್ಸಂಟೇಜ್ ಅನ್ನು 7% ಗೆ ಹೆಚ್ಚಿಸಬೇಕೆಂದು ಆಗ್ರಹಿಸಿದರು. ಬೆಳಗಾವಿ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಗಾಣಗಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ರಾಯಭಾಗ ತಾಲೂಕಾ ಅಧ್ಯಕ್ಷ ಮಹೇಶ ಪಾಟೀಲ್, ಪ್ರಾಂತ ಕಾರ್ಯಕಾರಿಣಿ ಸದಸ್ಯ ಜಯಪಾಲ್ ನಾಗನೂರ್, ಬೈಲಹೊಂಗಲ ತಾಲೂಕಾ ಉಪಾಧ್ಯಕ್ಷ ಅಜ್ಜಪ್ಪ ಭದ್ರಶೆಟ್ಟಿ, ಕಾರ್ಯದರ್ಶಿ ಸಂತೋಷ ಚೌಡಣ್ಣವರ ಮತ್ತು ಬಸವರಾಜ ಮುರಕಿಬಾವಿ, ಪ್ರಮುಖರಾದ ರಾಮರಾಜ ಇನಾಮದಾರ, ನಿಂಗಪ್ಪ ಚೌಡಣ್ಣವರ, ಮಲ್ಲಿಕಾರ್ಜುನ ಅಂದಾನಶೆಟ್ಟಿ, ಶಿವಶಂಕರ ಮಾಡಲಗಿ, ರಾಜು ಅಂದಾನಶೆಟ್ಟಿ, ನಿರ್ಗುಣ ರೇವಣ್ಣವರ, ಸಂಜೀವ ಚೌಡಣ್ಣವರ, ಮಾಯಪ್ಪ ಬಾಗಲಕೋಟಿ ಮತ್ತಿತರು ಉಪಸ್ಥಿತರಿದ್ದರು.