ಕನ್ನಡವನ್ನು ಬಹುಮುಖಿಯಾಗಿ ಬೆಳೆಸಿದ ಡಾ.ಕೆ.ಶಿವರಾಮ ಕಾರಂತರು
-ನಾಡೋಜ.ಡಾ.ಮಹೇಶ ಜೋಶಿ
ಬೆಂಗಳೂರು: ತಮ್ಮ ಬದುಕಿಗೆ ಯಾವುದೇ ಸೀಮಿತ ಪರಿಧಿಗಳನ್ನು ವಿಧಿಸಿಕೊಳ್ಳಲು ಬಯಸದ ಕಾರಂತರಿಗೆ ಜ್ಞಾನದ ಎಲ್ಲ ಶಾಖೆಗಳೂ ಹತ್ತಿರವಾಗಿ ಕಂಡವು, ಸಾಹಿತ್ಯ, ರಂಗಭೂಮಿ, ಚಲನಚಿತ್ರ, ವಿಜ್ಞಾನ, ಚಿತ್ರಕಲೆ, ಸಂಗೀತ, ಶಿಕ್ಷಣ, ರಾಜಕೀಯ, ಪತ್ರಿಕೋದ್ಯಮ, ಭಾಷೆ, ಸಂಸ್ಕೃತಿ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಅವರು ಕ್ರಿಯಾಶೀಲರಾಗಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ವಿಶ್ಲೇಷಿಸಿದರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಡಿಸಿದ್ದ ಡಾ.ಕೆ.ಶಿವರಾಮಕಾರಂತರ 122ನೆಯ ಹುಟ್ಟ ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಶಿವರಾಮ ಕಾರಂತರು ರೂಪಿಸಿದ “ಬಾಲ ಪ್ರಪಂಚ”, “ವಿಜ್ಞಾನ ಪ್ರಪಂಚ” ಯೋಜನೆಗಳು ವಿಶ್ವವಿದ್ಯಾಲಯಗಳಿಗೆ ಮಾತ್ರ ಸಾಧ್ಯವಿರುವಂತದ್ದು. ಇಂತಹದ್ದನ್ನು ಒಬ್ಬರೇ ಕೈಗೊಂಡು ಸಾಧಿಸಿದರು. ಸಿರಿಗನ್ನಡ ಅರ್ಥಕೋಶ ತಯಾರಿಸಿದರು. ಯಕ್ಷಗಾನ ಕುರಿತ ಪುಸ್ತಕಗಳನ್ನು ಬರೆದರು. ಸ್ವತಃ ಹಲವು ಪ್ರಯೋಗಗಳನ್ನು ನಡೆಸಿದರು. ಶಿಲ್ಪಕಲೆ, ಚಿತ್ರಕಲೆಗಳ ಕುರಿತಾದ ಪುಸ್ತಕಗಳನ್ನು ಬರೆದರು. ಸ್ವತಃ ಚಿತ್ರರಚನೆಯನ್ನೂ ಮಾಡಿದರು. ಚಲನಚಿತ್ರ ನಿರ್ಮಿಸಿದರು, ನಿರ್ದೇಶಿಸಿದರು. ನಾಟಕ, ಯಕ್ಷಗಾನಗಳಲ್ಲಿ ನಟಿಸಿದರು. ನಲವತ್ತಕ್ಕೂ ಹೆಚ್ಚು ಕಾದಂಬರಿಗಳನ್ನೂ, ಹಲವಾರು ಪ್ರವಾಸ ಕಥನಗಳನ್ನೂ, ಆತ್ಮ ಚರಿತ್ರೆಯನ್ನೂ ಬರೆದರು. ‘ಪ್ರಾಣಿ ಪ್ರಪಂಚದ ವಿಸ್ಮಯಗಳು’ ಅವರು 90 ವರ್ಷದ ಸಮೀಪದಲ್ಲಿದ್ದಾಗ ಪ್ರಕಟವಾದ ಕೃತಿ. ಒಂದು ಕಾಲದಲ್ಲಿ ಅವರು ತಮ್ಮ ಪುಸ್ತಕಗಳಿಗೆ ತಾವೇ ಪ್ರಕಾಶಕರೂ, ವಿನ್ಯಾಸಕರೂ, ಮುದ್ರಕರೂ, ಮಾರಾಟಗಾರರೂ ಆಗಿದ್ದರು ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ಕಾರಂತರು ಪ್ರವೇಶಿಸಿದ ಕ್ಷೇತ್ರಗಳೇ ಇಲ್ಲ ಎಂದು ನಾಡೋಜ ಡಾ.ಮಹೇಶ ಜೋಶಿಯವರು ಹೇಳಿದರು
ಕಾರಂತರ ಜೊತೆಗಿನ ತಮ್ಮ ಒಡನಾಟದ ಅನುಭವಗಳನ್ನು ಹಂಚಿ ಕೊಂಡ ನಾಡೋಜ ಡಾ.ಮಹೇಶ ಜೋಶಿಯವರು ಡಾ.ವಿ.ಕೃ.ಗೋಕಾಕರಿಗೆ ಜ್ಞಾನಪೀಠ ಬಂದಾಗ ಕಾರಂತರು ಅವರನ್ನು ಸಂದರ್ಶಿಸಿದ ವಿಶೇಷ ಪ್ರಸಂಗವನ್ನು ದಾಖಲಿಸುವ ಅವಕಾಶ ತಮಗೆ ದೊರಕಿದ್ದು ಅದೃಷ್ಟವೆಂದು ಹೇಳಿ ಕಾರಂತರ ಪ್ರತಿ ಭೇಟಿಯೂ ಒಂದಲ್ಲ ಒಂದು ರೀತಿಯಲ್ಲಿ ತಮ್ಮನ್ನು ಬೆಳೆಸಿತು. ಕಾರಂತರ ಲೋಕದೃಷ್ಟಿ ಅಸಾಧಾರಣವಾದದ್ದು. ಅವರ ನಿಷ್ಠೆ ಕೇವಲ ಒಂದು ಮನುಷ್ಯ ಸಮೂಹಕ್ಕಾಗಲಿ, ಒಂದು ನಿರ್ದಿಷ್ಟ ಭೌಗೋಳಿಕ ಪರಿಸರಕ್ಕಾಗಲೀ ಸೀಮಿತವಾಗಿರಲಿಲ್ಲ. ಇಡೀ ಬ್ರಹ್ಮಾಂಡವನ್ನು ಒಳಗೂಳ್ಳುವ ಉದಾರವಾದ ಮನಸ್ಸು ಕಾರಂತರದ್ದು ಎಂದು ಹೇಳಿದರು.
ಕಾರಂತರು ನನಗೆ ಬಾಲ್ಯದ ಬೆರಗು ಎಂದ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್.ಶ್ರೀಧರ ಮೂರ್ತಿಯವರು ಅವರ ಕಂಡ ಘಟನೆಗಳನ್ನು ನೆನಪು ಮಾಡಿ ಕೊಂಡು ಕನ್ನಡ ಕಾದಂಬರಿ ಲೋಕಕ್ಕೆ ವಾಸ್ತವದ ನೆಲೆ ನೀಡಿದ ಹೆಗ್ಗಳಿಕೆ ಕಾರಂತರದು. ವಿಕಾಸದ ಆದರ್ಶ ಇಡೀ ಒಂದು ಸಮುದಾಯದ ದೃಷ್ಟಿಯಿಂದ ದೂರದ ಕನಸಾಗಿ ಕಂಡರೂ ವೈಯಕ್ತಿಕ ಮಟ್ಟದಲ್ಲಿ ಅದು ಅಸಾಧ್ಯವಲ್ಲ ಎನ್ನುವುದು ಅವರ ಕಾದಂಬರಿಗಳು ತೋರಿಸಿಕೊಡುತ್ತವೆ. ಅಂತೆಯೇ ಈ ದೃಷ್ಟಿ ಒಟ್ಟು ಕಾದಂಬರಿಯ ಆಶಯದಲ್ಲಿ, ಅಲ್ಲಿನ ಕೆಲವೊಂದು ಪಾತ್ರಗಳ ಶೀಲದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ
ಕಾರಂತರ ಆತ್ಮ ಚರಿತ್ರೆಯಾದ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಮತ್ತು ‘ಸ್ಮೃತಿ ಪಟಲದಿಂದ ಭಾಗ ೧, ೨, ೩ ಕಾರಂತರು ಬೆಳೆದು ಬಂದ ಕ್ರಮವನ್ನೂ ಅವರ ಆಶಯ, ಪ್ರೇರಣೆಗಳನ್ನೂ ಖಚಿತವಾಗಿ ನಿರೂಪಿಸುತ್ತವೆ. ಕಾರಂತರ ಪ್ರವಾಸ ಗ್ರಂಥಗಳಾದ ‘ಅಬೂನಿಂದ ಬರಾಮಕ್ಕೆ’, ‘ಅಪೂರ್ವ ಪಶ್ಚಿಮ’, ‘ಪೂರ್ವದಿಂದ ಅತ್ಯಪೂರ್ವಕ್ಕೆ’ ಮುಂತಾದ ಕೃತಿಗಳಲ್ಲಿ ನಮಗೆ ಒದಗುವ ಮಾಹಿತಿ, ಹುಟ್ಟಿಸುವ ಕುತೂಹಲ ವಿಶಿಷ್ಟವಾದದ್ದು. ಒಂದು ಪ್ರದೇಶದ ಚಾರಿತ್ರಿಕ, ಭೌಗೋಳಿಕ, ಸಾಂಸ್ಕೃತಿಕ ವಿವರಗಳು, ಅಲ್ಲಿನ ಸಸ್ಯ, ಪ್ರಾಣಿಜಗತ್ತು, ಜನಜೀವನ ಯಾವುದನ್ನೂ ಕಾರಂತರ ಕಣ್ಣುಗಳು ತಪ್ಪಿಸಿಕೊಳ್ಳುವುದಿಲ್ಲವೆಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ, ಡಾ.ಪದ್ಮಿನಿ ನಾಗರಾಜು, ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ್ ಪಾಂಡು ಸೇರಿದಂತೆ ಪರಿಷತ್ತಿನ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ