ಮುಂಬೈ: ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ರತನ್ ಟಾಟಾ (86 ವರ್ಷ) (Ratan Tata) ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ತಡರಾತ್ರಿ ನಗರದ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ರತನ್ ಟಾಟಾ ಬಳಲುತ್ತಿದ್ದರು. ರಕ್ತದೊತ್ತಡದಲ್ಲಿ ಕುಸಿತದ ಹಿನ್ನೆಲೆಯಲ್ಲಿ ತಪಾಸಣೆಗಾಗಿ ಸೋಮವಾರ ರತನ್ ಟಾಟಾ ಮುಂಬಯಿಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಆಳವಾದ ದುಃಖ ಭಾವನೆಯೊಂದಿಗೆ ನಾವು ರತನ್ ನೇವಲ್ ಟಾಟಾ ಅವರಿಗೆ ವಿದಾಯ ಹೇಳುತ್ತೇವೆ. ಅವರ ಅಗಾಧ ಕೊಡುಗೆಗಳು ಟಾಟಾ ಗ್ರೂಪ್ ಅನ್ನು ಮಾತ್ರವಲ್ಲದೆ ನಮ್ಮ ರಾಷ್ಟ್ರವನ್ನು ರೂಪಿಸಿವೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಹೇಳಿದರು.
1991ರಲ್ಲಿ ಟಾಟಾ ಸನ್ಸ್‌ನ ಚೇರ್ಮನ್ ಆಗಿದ್ದ ರತನ್ ಟಾಟಾ, 2012ರವರೆಗೂ ಈ ಹುದ್ದೆಯಲ್ಲಿದ್ದರು. ತಮ್ಮ ಮರಿ ಮುತ್ತಜ್ಜ ಸ್ಥಾಪನೆ ಮಾಡಿದ್ದ ಗ್ರೂಪ್ ಅನ್ನು ದೊಡ್ಡ ಮಟ್ಟದಲ್ಲಿ ಯಶಸ್ಸಿನ ಪಥದಲ್ಲಿ ಸಾಗಿಸಿದ್ದರು. 1996ರಲ್ಲಿ ಟಾಟಾ ಟೆಲಿ ಸರ್ವೀಸಸ್ ಕಂಪನಿ ಸ್ಥಾಪನೆ ಬಳಿಕ 2004ರಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಕಂಪನಿ ಸಾರ್ವಜನಿಕ ಪಾಲುದಾರ ಕಂಪನಿಯಾಗಿ ಮಾಡಿದ್ದರು.