ಸದೃಢ ದೇಶ ಕಟ್ಟಲು ಸಾಧ್ಯ : ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ
ಹುನಗುಂದ : ಕ್ರೀಡೆಯನ್ನು ಕ್ರೀಡಾ ಮನೋಭಾವನೆದಿಂದ ಆಟ ಆಡಬೇಕು. ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆ ಅವಶ್ಯ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಶುಕ್ರವಾರ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾ ಸಮಾರಂಭವನ್ನು ಕ್ರೀಡಾ ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು,ಕ್ರೀಡೆಯಲ್ಲಿ ಸೋಲು ಮತ್ತು ಗೆಲುವನ್ನು ಸಮನಾಗಿ ಸ್ವೀಕರಿಸಿದಾಗ ಉತ್ತಮ ಕ್ರೀಡಾಪಟು ಆಗಲು ಸಾಧ್ಯ.ದೇಶದ ಭವಿಷ್ಯ ಇಂದಿನ ಮಕ್ಕಳ ಮೇಲಿದೆ ನೀವು ಸದೃಢವಾದಾಗ ಮಾತ್ರ ಸದೃಢ ದೇಶವನ್ನು ಕಟ್ಟಲು ಸಾಧ್ಯ,ಪ್ರತಿಯೊಬ್ಬ ಕ್ರೀಡಾಪಟು ಸಂತೋಷದಿಂದ ಕ್ರೀಡೆಯಲ್ಲಿ ಪಾಲ್ಗೊಂಡು ನಿರ್ಣಾಯಕರ ತೀರ್ಪುಗೆ ತಲೆಬಾಗಿ ವಿಜಯಶಾಲಿಗಳಾಗಿ ಜಿಲ್ಲಾ ಮಟ್ಟ ಮತ್ತು ರಾಜ್ಯಮಟ್ಟದಲ್ಲಿ ನಿಮ್ಮ ಪ್ರತಿಭೆ ಗುರುತಿಸುವಂತಾಗಲಿ ಎಂದು ವಿದ್ಯಾರ್ಥಿಗಳಿಗೆ ಶಾಸಕರು ಕಿವಿ ಮಾತು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಸ್ಮಿನ್ ಕಿಲೇದಾರ ಮಾತನಾಡಿ, ಕ್ರೀಡೆಯಿಂದ ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಲು ಸಹಕಾರಿ.ಕ್ಲಸ್ಟರ್ ಮತ್ತು ವಲಯ ಮಟ್ಟದಲ್ಲಿ ನಿಮ್ಮ ಪ್ರತಿಭೆಯನ್ನು ತೋರಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದೀರಿ, ಸೋಲು ಗೆಲುವು ಮುಖ್ಯವಲ್ಲ ಕ್ರೀಡೆಯಲ್ಲಿ ಭಾಗವಹಿಸುವುದು ಬಹಳ ಮುಖ್ಯ.ಕ್ರೀಡೆ ನಿಮ್ಮನ್ನು ಸದೃಢತೆಯಿಂದ ಮುನ್ನಡೆಸಲು ಸಹಾಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ವೀರಾಗ್ರಹಣಿ ಪ್ರಶಸ್ತಿಯನ್ನು ಪಡೆದುಕೊಂಡ ಮಕ್ಕಳಿಗೆ ಮತ್ತು ವಿಜೇತ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ವೇದಿಕೆಯಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮುರುಳಿಧರ ದೇಶಪಾಂಡೆ,ಇಳಕಲ್ ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ ಹುನಗುಂದ ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ,ದೈಹಿಕ ಪರಿವೀಕ್ಷಕ ಎಸ್. ಬಿ.ಫೈಲ್,ವಿಜಯ ಗದ್ದನಕೇರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಂಗಮೇಶ ಪಾಟೀಲ,ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಗದ್ದನಕೇರಿ ಇತರರಿದ್ದರು. ದೈಹಿಕ ಶಿಕ್ಷಕ ಚೌಡಪ್ಪ ಕುರಿ ನಿರೂಪಿಸಿ ವಂದಿಸಿದರು.