Prajwal Revanna ಪಾಸ್‌ಪೋರ್ಟ್‌ ರದ್ದು ಕೋರಿ ಕೇಂದ್ರಕ್ಕೆ ಪತ್ರ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0

ಬೆಂಗಳೂರು: ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಲುಕ್‌ಔಟ್‌ ನೋಟಿಸ್‌, ಬ್ಲೂ ಕಾರ್ನರ್‌ ನೋಟಿಸ್‌ ಹೊರಡಿಸಿತ್ತು. ಆದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ(ಎಸ್‌ಐಟಿ)ವು ಆರೋಪಿ ಬಳಸುತ್ತಿರುವ ರಾಜತಾಂತ್ರಿಕ ಹಾಗೂ ಸಾಮಾನ್ಯ ಪಾಸ್‌ ಪೋರ್ಟ್‌ ರದ್ದು ಕೋರಿ ಕೇಂದ್ರ ಸರಕಾರ ಹಾಗೂ ಸಂಬಂಧಿತ ಇಲಾಖೆಗೆ ಪತ್ರ ಬರೆದು ಬರೆದಿದೆ.
ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್‌ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡು 25 ದಿನ ಕಳೆದರೂ ಇದುವರೆಗೂ ಯಾವ ದೇಶದಲ್ಲಿ ಇದ್ದಾನೆ ಎಂಬುದು ಪತ್ತೆ ಆಗುತ್ತಿಲ್ಲ. ಮತ್ತೊಂದೆಡೆ ಆತನ ಬಳಿ ಇರುವ ರಾಜತಾಂತ್ರಿಕ ಪಾಸ್‌ಪೋರ್ಟ್‌ನಿಂದ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗುತ್ತಿದ್ದಾನೆ. ಹೀಗಾಗಿ ಆತನ ಬಂಧನಕ್ಕೆ ವಾರೆಂಟ್‌ ಪಡೆದುಕೊಂಡಿರುವ ಎಸ್‌ಐಟಿ ಅಧಿಕಾರಿಗಳು, ಈ ಮೂಲಕ ಆರೋಪಿಯ ಪಾಸ್‌ಪೋರ್ಟ್‌ ರದ್ದು ಮಾಡುವಂತೆ ಕೋರಿದ್ದಾರೆ. ಆತನ ಸಾಮಾನ್ಯ ಪಾಸ್‌ಪೋರ್ಟ್‌ ಮತ್ತು ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಗೊಳಿಸುವಂತೆ ವಿದೇಶಾಂಗ ಇಲಾಖೆಗೆ ಎಸ್‌ಐಟಿ ಪತ್ರ ಬರೆದಿದೆ. ಆರೋಪಿ ವಿರುದ್ಧ ಗಂಭೀರ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಆತ ಯಾವ ದೇಶದಲ್ಲಿ ಇದ್ದಾನೆ ಎಂಬ ಮಾಹಿತಿಯನ್ನು ತನಿಖಾ ತಂಡಕ್ಕೆ ನೀಡುವಂತೆಯೂ ಪತ್ರದಲ್ಲಿ ಉಲ್ಲೇಖೀಸಲಾಗಿದೆ ಎಂದು ಎಸ್‌ಐಟಿ ಉನ್ನತ ಮೂಲಗಳು ತಿಳಿಸಿವೆ.
ಪಾಸ್‌ಪೋರ್ಟ್‌ ರದ್ದಾದರೆ ಬಂಧನ ಸುಲಭ
ಒಂದು ವೇಳೆ ಪಾಸ್‌ಪೋರ್ಟ್‌ ರದ್ದಾದರೆ ಪ್ರಜ್ವಲ್‌ ಬಂಧನ ಸುಲಭ ವಾಗಲಿದೆ. ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಗೊಳಿಸಿದ ಬಳಿಕ ಆರೋಪಿ ಸ್ವದೇಶಕ್ಕೆ ಬರಲೇಬೇಕಾಗುತ್ತದೆ. ಮತ್ತೂಂದೆದೆ ದೇಶದ ಎಲ್ಲ ವಿಮಾನ ನಿಲ್ದಾಣ ಹಾಗೂ ಪೋರ್ಟ್‌ಗಳಿಗೆ ಆರೋಪಿಯ ಕುರಿತು ಲುಕ್‌ಔಟ್‌ ನೋಟಿಸ್‌ ಹೊರಡಿಸಿರುವ ಹಿನ್ನೆಲೆಯಲ್ಲಿ ದೇಶಕ್ಕೆ ಬರುತ್ತಿದ್ದಂತೆ ಬಂಧಿಸಲಾಗುತ್ತದೆ.
ಎರಡು ದಿನದಲ್ಲಿ ರೆಡ್‌ ಕಾರ್ನರ್‌ ನೋಟಿಸ್‌?
ಆರೋಪಿಯ ಪಾಸ್‌ಪೋರ್ಟ್‌ ರದ್ದು ಕೋರಿ ಕೇಂದ್ರಕ್ಕೆ ಪತ್ರ ಬರೆದಿರುವ ಎಸ್‌ಐಟಿ ಅಧಿಕಾರಿಗಳು, ಒಂದೆರಡು ದಿನಗಳಲ್ಲಿ ಕೇಂದ್ರ ಸರಕಾರದಿಂದ ಉತ್ತರ ಬರುವ ನಿರೀಕ್ಷೆಯಲ್ಲಿದ್ದಾರೆ. ಒಂದು ವೇಳೆ ಕೇಂದ್ರ ಸರಕಾರ ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ನೀಡದಿದ್ದರೆ, ಪ್ರಜ್ವಲ್‌ ವಿರುದ್ಧದ ಅರೆಸ್ಟ್‌ ವಾರೆಂಟ್‌ ಆಧಾರದಲ್ಲಿ ಮುಂದಿನ ಒಂದೆರಡು ದಿನಗಳಲ್ಲಿ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Post a Comment

0Comments

Post a Comment (0)