ಆಂಧ್ರಪ್ರದೇಶ: ಚುನಾವಣೆಗೂ ಮುನ್ನ ಆಂಧ್ರಪ್ರದೇಶದಲ್ಲಿ ದಾಖಲೆ ಇಲ್ಲದ ಕಂತೆ ಕಂತೆ ಹಣಗಳು ಪತ್ತೆಯಾಗುತ್ತಿವೆ. ಅದಕ್ಕೆ ಪುಷ್ಟಿ ಎಂಬಂತೆ ಇನ್ನೇನು ಎರಡು ದಿನಗಳಲ್ಲಿ ಚುನಾವಣೆ ನಡೆಯಲಿದೆ ಎನ್ನುವಷ್ಟರಲ್ಲಿ ಅನಂತಪಲ್ಲಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಪಲ್ಟಿಯಾದ ವಾಹನದಲ್ಲಿ ಕಂತೆ ಕಂತೆ ಹಣಗಳು ಪತ್ತೆಯಾಗಿದೆ.
ಆಂಧ್ರಪ್ರದೇಶದ ನಲ್ಲಜರ್ಲ ಮಂಡಲದ ಅನಂತಪಲ್ಲಿಯಲ್ಲಿ ಟಾಟಾ ಏಸ್ ವಾಹನವೊಂದು ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗೆ ಪರಿಣಾಮ ವಾಹನದಲ್ಲಿದ್ದ ವಸ್ತುಗಳೆಲ್ಲಾ ರಸ್ತೆಗೆ ಎಸೆಯಲ್ಪಟ್ಟಿದೆ. ಈ ವೇಳೆ ಅಲ್ಲಿದ್ದ ಸ್ಥಳೀಯರು ವಸ್ತುಗಳನ್ನು ಸರಿಯಾಗಿ ಜೋಡಿಸಲು ನೆರವಾಗಿದ್ದಾರೆ ಈ ವೇಳೆ ಅಲ್ಲಿದ್ದ ಕೆಲ ರಟ್ಟಿನ ಬಾಕ್ಸ್ ನಲ್ಲಿ ಹಣದ ಕಂತೆಗಳು ಪತ್ತೆಯಾಗಿವೆ ಇದರಿಂದ ಗಾಬರಿಗೊಂಡ ಸ್ಥಳೀಯರು ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ತಪಾಸಣೆ ನಡೆಸುವ ವೇಳೆ ರಟ್ಟಿನ ಬಾಕ್ಸ್ ಒಳಗೆ ಕಂತೆ ಕಂತೆ ನೋಟುಗಳು ಕಂಡುಬಂದಿವೆ.
ಬಳಿಕ ಹಣವನ್ನು ವಶಕ್ಕೆ ಪಡೆದ ಪೊಲೀಸರು ಲೆಕ್ಕ ಹಾಕುವ ವೇಳೆ ಅದರಲ್ಲಿ ಏಳು ಕೋಟಿಗೂ ಅಧಿಕ ಮೌಲ್ಯ ಇರುವುದಾಗಿ ಕಂಡುಬಂದಿದೆ.
ಅಪಘಾತದ ವೇಳೆ ವಾಹನ ಚಾಲಕ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.