Hubli: ರಾಹುಲ್ ಗಾಂಧಿಗೆ ಸೋಲಿನ ಕನಸು ಬೀಳುತ್ತಿದೆ..: ಪ್ರಹ್ಲಾದ ಜೋಶಿ ಟೀಕೆ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಹುಬ್ಬಳ್ಳಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಸೋಲಿ‌ನ‌ ಕನಸು ಬೀಳುತ್ತಿದೆ. ಹೀಗಾಗಿ ಚುನಾವಣಾ ಆಯೋಗದ ಮೇಲೆ ಅನುಮಾನ ಪಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹರಿಹಾಯ್ದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಾಗ ಇವಿಎಂ ಸಮಸ್ಯೆ ಇರಲಿಲ್ಲ. ಆದರೆ ನಾವು ಗೆದ್ದರೆ ಮಾತ್ರ ಅದರ ಬಗ್ಗೆ ಸಮಸ್ಯೆ ಎಂದು ಕಾಂಗ್ರೆಸ್ನವರು ಹೇಳುತ್ತಾರೆ. ಅವರು ಸೋಲಿನ ಭಯದಿಂದ ಹತಾಶರಾಗಿ ಮಾತನಾಡುತ್ತಿದ್ದಾರೆ. ಆ ಪಕ್ಷ ತನ್ನ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದರು.
ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಬಹಳ ಬದಲಾವಣೆಯಾಗಿದೆ. ಬಿಜೆಪಿ ಗೆಲ್ಲಿಸಬೇಕೆಂದು ಜನ‌ ತೀರ್ಮಾನ ಮಾಡಿದ್ದಾರೆ ಎಂದರು.
ಬಿಜೆಪಿ, ಆರ್ಎಸ್ಎಸ್ ವಿಷವಿದ್ದಂತೆ, ಅದರ ರುಚಿ ನೋಡಬೇಡಿ ಎಂಬ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಖರ್ಗೆ ಬಾಲಿಶ ಹೇಳಿಕೆ ನೀಡುತ್ತಿದ್ದಾರೆಂದು ಕುಟುಕಿದರು.
ಬಿಜೆಪಿಯು ಬಾಂಗ್ಲಾದೇಶ ಜೊತೆಗೆ ಸೌಹಾರ್ದ ಗಡಿ ಒಪ್ಪಂದ ಮಾಡಿಕೊಂಡಂತೆ ನಾವು ಶ್ರೀಲಂಕೆಗೆ ಸ್ನೇಹದ ಸಂಕೇತವಾಗಿ ಕಚತೀವು ದ್ವೀಪ ಕೊಟ್ಟಿದ್ದೇವೆಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸುತ್ತ, ಒಂದು ಸಾರ್ವಭೌಮ ಸರ್ಕಾರ ಒಮ್ಮೆ ಒಪ್ಪಂದಕ್ಕೆ ಸಹಿ ಹಾಕಿದ ಮೇಲೆ ಅದನ್ನು ವಾಪಸ್ ಪಡೆಯಲು ಸಾಧ್ಯವೇ? ಅನೇಕ ದೇಶಗಳ ಜೊತೆ ಒಡಂಬಡಿಕೆ ಮಾಡಿಕೊಂಡಿರುತ್ತೇವೆ. ಸರ್ಕಾರ ಬದಲಾದ ಕೂಡಲೇ ಆ ಒಡಂಬಡಿಕೆ ರದ್ದು ಮಾಡಿಕೊಳ್ಳಲು ಆಗಲ್ಲ. ನೀವು ದ್ವೀಪವನ್ನು ಕೊಟ್ಟಿದ್ದು ಯಾಕೆ ಎಂದು ಹೇಳಿ. ನಮ್ಮ ಮೂರ್ಖತನದಿಂದ ಕೊಟ್ಟಿದ್ದೇವೆ ಎಂದು ಒಪ್ಪಿಕೊಳ್ಳಲಿ. ನಮ್ಮ ದೇಶದ ನೆಲ, ಜಲದ ಬಗ್ಗೆ ನಮಗೆ ಕಾಳಜಿ ಇರಲಿಲ್ಲವೆಂದು ಒಪ್ಪಿಕೊಳ್ಳಲಿ. ಅದನ್ನು ಬಿಟ್ಟು ಈ ರೀತಿ ಬಾಲಿಶ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದು ಹರಿಹಾಯ್ದರು.


Post a Comment

0Comments

Post a Comment (0)