ಬೆಳಗಾವಿ : ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲೇ ಸರ್ಕಾರಿ ಸೂಪರ ಸ್ಪೆಷಾಲಿಟಿ ಆಸ್ಪತ್ರೆಯನ್ನು ಇಂದು ಉದ್ಘಾಟನೆ ಮಾಡಿದ್ದು ತುಂಬಾ ಸಂತಸ ನೀಡಿದೆ, ಅದೇ ರೀತಿ ಈ ಸೂಪರ ಸ್ಪೆಷಾಲಿಟಿ ಆಸ್ಪತ್ರೆ ಸಮಾಜದ ಕಟ್ಟಕಡೆಯ, ಬಡ ಹಿಂದುಳಿದ ಜನರಿಗೆ ಉತ್ತಮವಾದ ವೈದ್ಯಕೀಯ ಸೇವೆಯನ್ನು ನೀಡುವಂತಾಗಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಶನಿವಾರ ದಿನಾಂಕ 04/10/2025ರಂದು ನಗರದ ಸೂಪರ ಸ್ಪೆಷಾಲಿಟಿ ಆಸ್ಪತ್ರೆ, ನಗರ ಬಸ ನಿಲ್ದಾಣ ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ವಿವಿಧ ಕಟ್ಟಡ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದ್ವೀಪ ಪ್ರಜ್ವಲಿಸುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, 2013 ರಿಂದ 2018 ವರೆಗಿನ ನಮ್ಮ ಹಿಂದಿನ ಸರಕಾರದಲ್ಲಿ ಈ ಕಟ್ಟಡದ ಕಾಮಗಾರಿಯನ್ನು ಪ್ರಾರಂಭಿಸಿದ್ದು ಕಾರಣಾಂತರಗಳಿಂದ ಮುಗಿದಿರಲಿಲ್ಲ, ಆದರೆ ಈಗ ಮತ್ತೆ ನಮ್ಮ ಸರ್ಕಾರ ಬಂದ ನಂತರ ಬಾಕಿ ಉಳಿದ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ ಇಂದು ಉದ್ಘಾಟನೆ ಮಾಡಿದ್ದು ತುಂಬಾ ಸಂತಸ ತಂದಿದೆ ಎಂದಿದ್ದಾರೆ.
ಬೆಳಗಾವಿ ಜಿಲ್ಲೆಗೆ ಇಂತಹ ಸೂಪರ ಸ್ಪೆಷಾಲಿಟಿ ಆಸ್ಪತ್ರೆ ತುಂಬಾ ಅವಶ್ಯಕ, ನಮ್ಮದು ಕಡು ಬಡವರ, ದೀನದಲಿತರ, ಹಿಂದುಳಿದವರ, ದುರ್ಬಲರ, ಅಲ್ಪಸಂಖ್ಯಾತರ ಪರವಾಗಿ ಇರುವ ಸರ್ಕಾರ, ಸರ್ಕಾರಿ ಆಸ್ಪತ್ರೆಗಳಿಗೆ ಆದಷ್ಟು ಬಡವರೇ ಹೆಚ್ಚು ಬರುವರು, ಆದಕಾರಣ ಈ ಆಸ್ಪತ್ರೆಗೆ ಬರುವಂತಾ ಎಲ್ಲಾ ಜನರಿಗೆ ಉತ್ತಮ ವೈದ್ಯಕೀಯ ಸೇವೆಯನ್ನು ನೀಡುವಂತಹ ಕಾರ್ಯವನ್ನು ಈ ಆಸ್ಪತ್ರೆ ಮಾಡಬೇಕು ಎಂದು ಸೂಚನೆ ನೀಡಿದರು.
ಶಾಸಕ ಆಶಿಪ್ (ರಾಜು) ಸೇಠ್ ಅವರು ಈ ಆಸ್ಪತ್ರೆಗೆ ವೈದ್ಯರ ಕೊರತೆ ಇದೆ ಎಂದು ಮನವಿ ಮಾಡಿಕೊಂಡಿದ್ದಾರೆ, ಈ ಮೂಲಕ ನಾವು ಹೇಳುವುದೆಂದರೆ ಹಂತಹಂತವಾಗಿ ಈ ಆಸ್ಪತ್ರೆಗೆ ವೈದ್ಯರನ್ನು ನೇಮಕ ಮಾಡುತ್ತೇವೆ. ಬರೀ ಆಸ್ಪತ್ರೆ ಕಟ್ಟಿದರೆ ಸಾಲದು, ಅಲ್ಲಿ ವೈದ್ಯರನ್ನು ಕೂಡಾ ನೇಮಕ ಮಾಡಬೇಕು, ಈ ಬಗ್ಗೆ ಶರಣ ಪ್ರಕಾಶ್ ಅವರನ್ನು ನಾನು ಕೇಳಿದೆ, ವೈದ್ಯರ ಕೊರತೆ ಇದೆಯಾ ಎಂದು, ಕೆಲವು ವಿಭಾಗದ ವೈದ್ಯರ ಕೊರತೆ ಇದೆ ಎಂದಿದ್ದಾರೆ.
ಪ್ರಭಾಕರ ಕೋರೆ ಅವರು, ಅವರ ಸೂಪರ ಸ್ಪೆಷಾಲಿಟಿ ಆಸ್ಪತ್ರೆಯಿಂದ ವೈದ್ಯರನ್ನು ಉಚಿತವಾಗಿ ಇಲ್ಲಿ ಸರ್ಕಾರಿ ಆಸ್ಪತ್ರೆಗೆ ಸೇವೆ ಮಾಡಲು ಕಳಿಸುತ್ತಿದ್ದಾರೆ ಆದಕಾರಣ ನನ್ನ ವತಿಯಿಂದ, ಸರ್ಕಾರದ ವತಿಯಿಂದ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ, ಈ ಭಾಗದ ಜನರು ಈ ಆಸ್ಪತ್ರೆಯ ಲಾಭವನ್ನು ಪಡೆದುಕೊಳ್ಳಿ ಎಂದು ಕೇಳಿಕೊಳ್ಳುವೆ ಎಂದಿದ್ದಾರೆ.
ಇಂತಹ ಆಸ್ಪತ್ರೆಗಳನ್ನು ಮಾಡುವುದರಿಂದ ಬಡವರು ಲಕ್ಷಾಂತರ ರೂಪಾಯಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಹಾಕುವದು ತಪ್ಪುತ್ತದೆ, ಸಾಮಾನ್ಯ ಜನರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ನಾವು ಉತ್ತಮ ಸೌಲಭ್ಯ ಕಲ್ಪಿಸಿ ಕೊಡುತ್ತೇವೆ ಎಂಬ ಮಾತನ್ನು ಈ ಸಂದರ್ಭದಲ್ಲಿ ಹೇಳುತ್ತೇವೆ.
ನಮ್ಮ ಸರ್ಕಾರ ಬಂದ ನಂತರ ದಾಖಲೆಯ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಒದಗಿಸಿದ್ದೇವೆ, ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಗ್ರಹಜ್ಯೋತಿ, ಯುವನಿಧಿ, ಅನ್ನಭಾಗ್ಯ ಎಂಬ ಪಂಚ ಗ್ಯಾರೆಂಟಿ ಯೋಜನೆಗಳ ಮೂಲಕ ಇಂದು ನಿರೀಕ್ಷೆಗಿಂತ ಮೀರಿದಷ್ಟು ಜನರಿಗೆ ಸರ್ಕಾರದ ಸೌಲಭ್ಯ ನೀಡಿದ್ದೇವೆ, ಅದರಂತೆ ಆರೋಗ್ಯದ ದೃಷ್ಟಿಯಿಂದಲೂ ಕೂಡಾ ಇಂತಹ ಆಸ್ಪತ್ರೆಗಳ ಸ್ಥಾಪನೆ, ಉತ್ತಮ ಆಧುನಿಕ ವೈದ್ಯಕೀಯ ಉಪಕರಣಗಳ ಪೂರೈಕೆ, ನುರಿತ ವೈದ್ಯರ ನೇಮಕ ಮಾಡುವ ಮೂಲಕ ಉತ್ತಮ ಆರೋಗ್ಯವನ್ನು ಜನಸಾಮಾನ್ಯರಿಗೆ ನೀಡುವಂತ ಕಾರ್ಯವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದಿದ್ದಾರೆ.
ಈ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ, ವೈದ್ಯಕೀಯ ಸಚಿವರಾದ ಶರಣಪ್ರಕಾಶ್ ಪಾಟೀಲ, ಉನ್ನತ ಶಿಕ್ಷಣ ಸಚಿವ ಸುಧಾಕರ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಶಾಸಕರಾದ ಆಶೀಘ್ (ರಾಜು) ಸೇಠ್, ಬಾಬಾಸಾಹೇಬ ಪಾಟೀಲ್, ಮಹಾಂತೇಶ್ ಕೌಜಲಗಿ, ರಾಜು ಕಾಗೆ, ಎಂಎಲ್ಸಿ ಗಳಾದ ನಾಗರಾಜ ಯಾದವ, ಚನ್ನರಾಜ ಹಟ್ಟಿಹೂಳಿ, ಪ್ರಭಾಕರ ಕೋರೆ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಮತ್ತಿತರರು ಉಪಸ್ಥಿತರಿದ್ದರು..