ಬೆಂಗಳೂರು
ಬಸವ ಸಮಿತಿ ಪ್ರಕಟಿಸಿರುವ ಫ್ರೆಂಚ್ ಭಾಷೆಯ ಪುಸ್ತಕ ‘ವಚನ’ ಫ್ರಾನ್ಸ್ ದೇಶದ ಪ್ರಸಿದ್ಧ ಸಾಂಸ್ಕೃತಿಕ ಸಂಘಟನೆ ಅಲಯನ್ಸ್ ಫ್ರಾಂಚೈಸೈನ ಸಹಯೋಗದಲ್ಲಿ ಇತ್ತೀಚೆಗೆ ಲೋಕಾರ್ಪಣೆಯಾಯಿತು.
ಬಸವಣ್ಣನವರ 2,500 ವಚನಗಳನ್ನು ಫ್ರೆಂಚ್ ಭಾಷೆಗೆ ತಂದಿರುವ ಪುಸ್ತಕವನ್ನು ಫ್ರಾನ್ಸಿನ ಕಾನ್ಸುಲ್ ಜನರಲ್ ಮಾರ್ಕ್ ಲ್ಯಾಮಿ ಬಿಡುಗಡೆ ಮಾಡಿದರು. ವಚನಗಳನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯ ನೆರವಿನಿಂದ ಭಾಷಾಂತರ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಬಸವ ಸಮಿತಿಯ ಅಧ್ಯಕ್ಷ ಅರವಿಂದ್ ಜತ್ತಿ ಫ್ರೆಂಚ್ ಭಾಷೆ ಮಾತನಾಡುವ ದೇಶಗಳಿಗೆ ಬಸವಣ್ಣವರನ್ನು ಪರಿಚಯ ಮಾಡಿಕೊಡಲು ಪುಸ್ತಕವನ್ನು ರೂಪಿಸಲಾಗಿದೆ ಎಂದರು. ಇದು ಕೇವಲ ಪುಸ್ತಕ ಬಿಡುಗಡೆಯಲ್ಲ, ಇದೊಂದು ಸಾಂಸ್ಕೃತಿಕ ಸೇತುವೆ. ಬಸವೇಶ್ವರರ ವಚನಗಳನ್ನು ಭೌಗೋಳಿಕ ಗಡಿ ದಾಟಿಸುವ ಪ್ರಯತ್ನ ಎಂದು ಹೇಳಿದರು.
ಈ ಪುಸ್ತಕವು ಮೊದಲು ಭಾರತದಲ್ಲಿರುವ ಎಲ್ಲಾ 23 ಅಲಯನ್ಸ್ ಫ್ರಾಂಚೈಸ್ ಗ್ರಂಥಾಲಯಗಳಲ್ಲಿ ಲಭ್ಯವಿರುತ್ತದೆ. ನಂತರ ಜಗತ್ತಿನಾದ್ಯಂತ ಇರುವ ಅಲಯನ್ಸ್ ಫ್ರಾಂಚೈಸಿನ ಕೇಂದ್ರಗಳಲ್ಲಿಯೂ ಲಭ್ಯಗೊಳಿಸಲು ಪ್ರಯತ್ನಿಸಲಾಗುವುದು.
ಕಾರ್ಯಕ್ರಮದ ಅಲಯನ್ಸ್ ಫ್ರಾಂಚೈಸೈನ ಮುಖ್ಯಸ್ಥ ಡಾ. ಚಿನ್ಮಯ ಪಿ ಚಿಗಟೇರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬಸವ ಸಮಿತಿ ಇದುವರೆಗೆ ವಚನಗಳನ್ನು 27 ಭಾರತೀಯ ಮತ್ತು ಐದು ವಿದೇಶಿ ಭಾಷೆಗಳಿಗೆ (ಪರ್ಷಿಯನ್, ಅರೇಬಿಕ್, ನೇಪಾಳಿ, ಜರ್ಮನ್ ಮತ್ತು ಈಗ ಫ್ರೆಂಚ್) ಅನುವಾದಿಸಿದೆ.
ಅನುವಾದ ಕಾರ್ಯದ ಎರಡನೇ ಹಂತವು ರಾಜಸ್ಥಾನಿ, ಗುಜರಾತಿ, ಸಿಂಧಿ, ಒರಿಯಾ, ಭೋಜ್‌ಪುರಿ, ಅಸ್ಸಾಮಿ, ಸಂತಾಲಿ, ಮೈಥಿಲಿ, ಕಾಶ್ಮೀರಿ, ಕೊಡವ, ಕೊಂಕಣಿ, ತುಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪೂರ್ಣಗೊಂಡಿದೆ.
ವಚನ ಸಾಹಿತ್ಯದ ಅನುವಾದವನ್ನು ಚೈನೀಸ್, ಜರ್ಮನ್, ಜಪಾನೀಸ್, ಸ್ಪ್ಯಾನಿಷ್ ಮತ್ತು ಉಜ್ಬೆಕ್ ಭಾಷೆಗಳಿಗೂ ಬಹುತೇಕ ಪೂರ್ಣಗೊಳಿಸಿದ್ದೇವೆ ಎಂದು ಜತ್ತಿ ಹೇಳಿದರು.