ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಖಾತೆಯಿಂದ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡ ಹಣದಲ್ಲಿ ₹20 ಕೋಟಿಗೂ ಹೆಚ್ಚು ಮೊತ್ತ ಲೋಕಸಭಾ ಚುನಾವಣೆಗೆ ಬಳಕೆಯಾಗಿರುವುದನ್ನು ಜಾರಿ ನಿರ್ದೇಶನಾಲಯ (ಇ.ಡಿ) ಪತ್ತೆ ಹಚ್ಚಿದೆ.
ನಿಗಮದ ಅಕ್ರಮದ ಬೆನ್ನುಹತ್ತಿರುವ ಇ.ಡಿ.
ಅಧಿಕಾರಿಗಳ ತಂಡ, ಬೆಂಗಳೂರಿನಿಂದ ಹೈದರಬಾದ್‌ನ ಬ್ಯಾಂಕ್ ಖಾತೆ, ಅಲ್ಲಿಂದ ಸೊಸೈಟಿಗೆ ವರ್ಗಾವಣೆಯಾಗಿರುವ ಹಣ ಎಲ್ಲೆಲ್ಲಿ ಹೋಗಿದೆ ಎಂಬುದನ್ನು ಪತ್ತೆ ಮಾಡಲು ತನಿಖೆಯನ್ನು ತೀವ್ರಗೊಳಿಸಿತ್ತು.
ಸೊಸೈಟಿಯ ಖಾತೆಯಿಂದ ವಿವಿಧ ಕಂಪನಿಗಳು, ಆಭರಣ ಹಾಗೂ ಮದ್ಯದ ಅಂಗಡಿಗಳಿಗೆ ಹೋಗಿ ಅಲ್ಲಿಂದ ಕೈ ಬದಲಾವಣೆಯಾಗಿತ್ತು ಎಂಬ ಮಾಹಿತಿ ಇತ್ತು. ಈ ಹಣ ಚುನಾವಣೆ ವೆಚ್ಚಕ್ಕೆ ವಿನಿಯೋಗವಾಗಿರುವ ಖಚಿತ ಮಾಹಿತಿ ಸಿಕ್ಕಿದೆ ಎಂದು ಇ.ಡಿ ಮೂಲಗಳು ಹೇಳಿವೆ.
ಬಾಯಿ ಬಿಡದಂತೆ ಒತ್ತಡ: ನಿಗಮದ ಅಧಿಕಾರಿ ಚಂದ್ರಶೇಖರನ್ ಮೇ 29ರಂದು ಶಿವಮೊಗ್ಗದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದು ಗೊತ್ತಾಗುತ್ತಿದ್ದಂತೆ ಬೆಂಗಳೂರಿಗೆ ದೌಡಾಯಿಸಿದ್ದ, ಅಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರು, ದೇವನಹಳ್ಳಿ ಬಳಿಯ ಏರೋಸ್ಪೇಸ್ ಪಾರ್ಕ್‌ಗೆ ಬಂದಿದ್ದರು. ನಿಗಮದ ಅಂದಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಜೆ.ಜಿ.ಪದ್ಮನಾಭ್ ಮತ್ತು ತಮ್ಮ ಆಪ್ತ ನೆಕ್ಕಂಟಿ ನಾಗರಾಜ್ ಅವರನ್ನು ಕರೆಸಿಕೊಂಡಿದ್ದರು. ಅವರನ್ನು ಕಾರಿನಲ್ಲಿ ಕೂರಿಸಿಕೊಂಡ ನಾಗೇಂದ್ರ, ಏನೇ ಒತ್ತಡ ಬಂದರೂ ತಮ್ಮ ಹೆಸರನ್ನು ಬಾಯಿ ಬಿಡದಂತೆ ಇಬ್ಬರ ಮೇಲೂ ಒತ್ತಡ ಹೇರಿದ್ದರು ಎಂಬುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.