One Nation One Election; 2029ರಿಂದಲೇ ಒಂದು ದೇಶ, ಒಂದು ಚುನಾವಣೆ ಜಾರಿ?
ನವದೆಹಲಿ: “ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಸಂವಿಧಾನಕ್ಕೆ ಹೊಸ ಅಧ್ಯಾಯ ಸೇರಿಸಲು ಕಾನೂನು ಆಯೋಗ ಶಿಫಾರಸು ಮಾಡುವ ಸಾಧ್ಯತೆ ಇದೆ. ಇದೇ ವೇಳೆ ಏಕಕಾಲಕ್ಕೆ 2029ರ ಮೇ-ಜೂನ್‌ನಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲು ಆಯೋಗ ಶಿಫಾರಸು ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ನಿವೃತ್ತ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಅವರ ನೇತೃತ್ವದ ಆಯೋಗವು ಏಕಕಾಲಕ್ಕೆ ಚುನಾವಣೆ ನಿಟ್ಟಿನಲ್ಲಿ ನೂತನ ಅಧ್ಯಾಯ ಅಥವಾ ಭಾಗ ಸೇರಿಸಲು ಸಂವಿಧಾನಕ್ಕೆ ತಿದ್ದುಪಡಿ ಮಾಡುವಂತೆ ಶಿಫಾರಸು ಮಾಡಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಸಂವಿಧಾನದ ಹೊಸ ಅಧ್ಯಾಯವು, ಲೋಕಸಭೆ, ರಾಜ್ಯಗಳ ವಿಧಾನಸಭೆಗಳು, ಪಂಚಾಯ್ತಿಗಳು ಮತ್ತು ಪುರಸಭೆಗಳಿಗೆ ಏಕಕಾಲಕ್ಕೆ ಚುನಾವಣೆ, ಏಕಕಾಲಕ್ಕೆ ಚುನಾವಣೆಯ ಸುಸ್ಥಿರತೆ ಮತ್ತು ಸಾಮಾನ್ಯ ಮತದಾರರ ಪಟ್ಟಿಗೆ ಸಂಬಂಧಿಸಿದ ವಿಷಯಗಳನ್ನು ಹೊಂದಿರಲಿದೆ. ಇದರಿಂದ 2029ರ ಮಧ್ಯ ಭಾಗದಲ್ಲಿ ಮೂರು ಹಂತಗಳಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
ಇದೇ ಸಮಯದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ರಾಜ್ಯಗಳಲ್ಲಿ, ವಿಧಾನಸಭೆಯ ಅವಧಿಯನ್ನು 3ರಿಂದ 6 ತಿಂಗಳ ಕಾಲ ಕಡಿತಗೊಳಿಸುವ ಸಾಧ್ಯತೆಯಿದೆ.