ಸುಪ್ರೀಂಕೋರ್ಟ್ ಖಡಕ್ ನಿರ್ದೇಶನದ ಬಳಿಕ ಎಸ್‌ಬಿಐ ಕೇಂದ್ರ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್ ಕುರಿತು ಮಾಹಿತಿಯನ್ನು ನೀಡಿದೆ. ಆದರೆ ಎಸ್‌ಬಿಐ ಈ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿಲ್ಲ ಎನ್ನವುದು ಆ ಬಳಿಕ ಬಹಿರಂಗವಾಗಿದೆ.
ಆರ್‌ಟಿಐ ಮಾಹಿತಿ ಪ್ರಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಚ್ 2018ರಿಂದ 16,518 ಕೋಟಿ ಮೌಲ್ಯದ 28,030 ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಿದೆ, ಆದರೆ ಗುರುವಾರ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಖರೀದಿದಾರರ ಪಟ್ಟಿಯಲ್ಲಿ ಕೇವಲ 18,871 ಬಾಂಡ್‌ಗಳ ಮಾರಾಟ ಮಾಡಿರುವ ಬಗ್ಗೆ ಮಾತ್ರ ಮಾಹಿತಿ ಇದ್ದು, ಅದರ ಮೌಲ್ಯ 12,516 ಕೋಟಿ ರೂ.ಆಗಿದೆ.
ಇನ್ನುಳಿದವುಗಳ ಬಗ್ಗೆ ಮಾಹಿತಿ ನೀಡಲಾಗಿಲ್ಲ.
4,002 ಕೋಟಿ ಮೌಲ್ಯದ 9,159 ಬಾಂಡ್‌ಗಳ ಮಾಹಿತಿಯನ್ನು ಏಕೆ ಬಹಿರಂಗಪಡಿಸಿಲ್ಲ?
ಈ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಲೆಕ್ಕಾಚಾರದಲ್ಲಿ “ಮೇಲ್ವಿಚಾರಣೆ” ಮಾಡಿಡುತ್ತಿದೆ ಎಂದು ಹೇಳಿದೆ. ಉತ್ತರದ ಇನ್ನೊಂದು ಭಾಗವು ಇನ್ನೂ ಸಾರ್ವಜನಿಕಗೊಳಿಸದ “ಸೀಲ್ ಮಾಡಿದ ಕವರ್” ನಲ್ಲಿದೆ.
ಫೆಬ್ರವರಿ 15ರಂದು, ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ಅಸಂವಿಧಾನಿಕ ಎಂದು ಘೋಷಿಸಿತ್ತು. ಮಾರ್ಚ್ 6 ರೊಳಗೆ ಚುನಾವಣಾ ಆಯೋಗಕ್ಕೆ ಬಾಂಡ್‌ಗಳಿಗೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ಬಹಿರಂಗಪಡಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸುಪ್ರೀಂಕೋರ್ಟ್ ನಿರ್ದೇಶಿಸಿತ್ತು.